ಕೆಂಪೇಗೌಡರು ಸಮಾಜದ ಒಳಿತಿಗಾಗಿ ಶ್ರಮಿಸಿದ ತ್ಯಾಗಮಹಿ: ಡಿ.ಕೆ.ಶಿವಕುಮಾರ್

ತುಮಕೂರು,ಆ.28: ಸರಕಾರಗಳು ಮಾಡದೇ ಇರುವ ಕೆಲಸಗಳನ್ನು ಮಠಗಳು ಜ್ಯಾತ್ಯಾತೀತವಾಗಿ ಮಾಡುತ್ತಿವೆ ಎಂದು ಇಚಿದನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದ ವಿದ್ಯುತ್ ಸರಬರಾಜು ಕಂಪೆನಿ ಅಧೀಕ್ಷಕ ಇಂಜಿನಿಯರ್ ಕಚೇರಿ ಆವರಣಲ್ಲಿ ಸೋಮವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರುಗಳ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ,ಧರ್ಮ,ಮುಖ್ಯವಲ್ಲ ನಮ್ಮನ್ನು ಪ್ರೀತಿಸುವವರು ಮುಖ್ಯ. ಯಾರು ಅರ್ಜಿಹಾಕಿ ಜಾತಿಯಲ್ಲಿ ಹುಟ್ಟಿರುವುದಿಲ್ಲ. ಅವರವರ ಧರ್ಮವನ್ನು ಕಾಪಾಡಿಕೊಳ್ಳಬೇಕಷ್ಟೇ ಎಂದರು.
ನಾಡಪ್ರಭು ಕೆಂಪೇಗೌಡ ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಇಡೀ ಸಮಾಜದ ಒಳಿತಿಗಾಗಿ ಶ್ರಮಿಸಿದ ತ್ಯಾಗಮಹಿ. ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡದಿದ್ದರೆ ಇಂದು ರಾಜ್ಯದ ಕೇಂದ್ರಸ್ಥಾನ ಆಗಿರುತ್ತಿರಲಿಲ್ಲ. ಬೆಂಗಳೂರು ಬೆಳೆದಿದೆ ಎಂದರೆ ಅದಕ್ಕೆ ಕಾರಣ ಕೆಂಪೇಗೌಡರು ಎಂದು ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಶ್ರೀಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಮಾತನಾಡಿ, ಕೆಂಪೇಗೌಡ ಒಕ್ಕಲಿಗರ ಪ್ರಭುವಲ್ಲ. ಅವರು ನಾಡಪ್ರಭು. ನಾಡಿನ ಸಮಸ್ತ ಜಾತಿ, ಧರ್ಮವನ್ನು ಗೌರವಿಸಿ ಅವರ ಬದಕನ್ನು ಹಸನಾಗಿಸಿದ ವ್ಯಕ್ತಿ. ದೇಶದ ಇತಿಹಾಸ, ಪರಂಪರೆಯ ಇತಿಹಾಸ ಅರಿಯದವನು ಇತಿಹಾಸ ಸೃಷ್ಠಿಸಲಾರ ಕೆಂಪೇಗೌಡರಂತಹ ಆದರ್ಶ ವ್ಯಕ್ತಿಗಳು ಬದುಕಿದ ರೀತಿಯಲ್ಲಿ ಬದುಕಲು ಯತ್ನಿಸಬೇಕು ಎಂದು ಕರೆ ನೀಡಿದರು.
ಮಕ್ಕಳಿಗೆ ಹೋಂವರ್ಕ್ ಮಾಡಿಕೊಡುವುದು,ಮಾಡಿಸುವುದು ಆಸ್ತಿ ಮಾಡುವುದು ಮುಖ್ಯವಲ್ಲ.ಅವರೊಳಗಿನ ವಿಶೇಷ ಶಕ್ತಿಯನ್ನು ಗುರುತಿಸಿ ಭವಿಷ್ಯವನ್ನು ಕಟ್ಟಿಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಚ್.ಎನ್.ಶ್ರೀನಿವಾಸಗೌಡ, ಎಸ್ಕಾಂ ಕಂಪನಿಗಳ ನಿರ್ದೇಶಕ ಟಿ.ಆರ್ ರಾಮಕೃಷ್ಣಯ್ಯ, ಕೆಂಪೇಗೌಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ಅಪ್ಪಾಜಿಗೌಡ, ಪ್ರಮುಖರಾದ ಕೆ.ಟಿ.ಹಿರಿಯಣ್ಣ, ಎಂ.ರಾಮಕೃಷ್ಣ ಮತ್ತಿತರರಿದ್ದರು.







