ಬಕ್ರೀದ್: ಕರಾವಳಿಯಲ್ಲಿ ಸೆ.1ರಂದು ಸರಕಾರಿ ರಜೆ ನೀಡಲು ಸಿಎಂಗೆ ಸಚಿವ ಖಾದರ್ ಮನವಿ

ಮಂಗಳೂರು, ಆ. 28: ಚಂದ್ರದರ್ಶನದ ಆಧಾರದಲ್ಲಿ ಕರಾವಳಿಯ ಕೆಲವು ಜಿಲ್ಲೆಗಳಲ್ಲಿ ಸೆ.1ರಂದು ಬಕ್ರೀದ್ ಹಬ್ಬ ಆಚರಿಸುವ ಬಗ್ಗೆ ಧಾರ್ಮಿಕ ಮುಖಂಡರು ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಸೆ.2ರಂದು ನಿಗದಿಯಾಗಿರುವ ಸರಕಾರಿ ರಜೆಯನ್ನು ಕರಾವಳಿ ಪ್ರದೇಶದಲ್ಲಿ ಸೆ.1ಕ್ಕೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಸಚಿವ ಯು.ಟಿ.ಖಾದರ್ ಮನವಿ ಮಾಡಿದ್ದಾರೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೆ.1ರಂದು ಬಕ್ರೀದ್ ಆಚರಿಸಲಾಗುತ್ತಿದೆ. ಆದರೆ, ಸೆ. 2ರಂದು ಸರಕಾರಿ ರಜೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಸರಕಾರಿ ನೌಕರರ ಹಿತದೃಷ್ಟಿಯಿಂದ ಸೆ.1ರಂದು ಸರಕಾರಿ ರಜೆ ಘೋಷಿಸುವಂತೆ ಖಾದರ್ ಅವರು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರು ನಿಯಮಾವಳಿಗಳಲ್ಲಿ ಅವಕಾಶ ಇದೆಯೇ ಎಂಬುದರ ಬಗ್ಗೆ ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಸರಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ಖಾದರ್ ಹೇಳಿದ್ದಾರೆ.





