ಹಾಸನ: ಗಣೇಶ ವಿಸರ್ಜನೆ, ಬಕ್ರೀದ್ ಹಬ್ಬ ಆಚರಣೆ ವೇಳೆ ಮುಂಜಾಗ್ರತ ಕ್ರಮ ವಹಿಸಲು ಜಿಲ್ಲಾಧಿಕಾರಿ ಸೂಚನೆ

ಹಾಸನ, ಆ.28: ಜಿಲ್ಲೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಹಾಗೂ ಬಕ್ರೀದ್ ಹಬ್ಬದಆಚರಣೆ ವೇಳೆ ಯಾವುದೇ ಕೋಮು ಸಂಘರ್ಷ ಅಥವಾ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಎಚ್ಚರ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಮೂರ್ತಿ ವಿಸರ್ಜನೆ ವೇಳೆ ಮೆರವಣಿಗೆ ಸಾಗುವ ಹಾದಿಯಲ್ಲಿ ನಿಗಾ ವಹಿಸಿ ಯಾವುದೇ ಕಾರಣಕ್ಕೂ ಅಶಾಂತಿ ತಲೆದೋರದಂತೆ ನಿಭಾಯಿಸಿ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜ್ಯೋತಿ ವೈದ್ಯನಾಥ್ ಅವರು ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಸಭೆಯಲ್ಲಿ ವಿವರಿಸಿದರು. ಈಗಾಗಲೇ ಪ್ರತಿಷ್ಠಾಪನೆ ಗೊಂಡಿರುವ ಗಣೇಶ ಮೂರ್ತಿಗಳ ವಿಸರ್ಜನೆಗೆ ದಿನಾಂಕ ನಿಗದಿಪಡಿಸಲಾಗಿದೆ. ನಗರ ಪಟ್ಟಣ ಪ್ರದೇಶಗಳಲ್ಲಿ ಬಕ್ರೀದ್ ದಿನದಂದು ಮೆರವಣಿಗೆ ನಿರ್ಭಂಧಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಭಾರ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜ್ , ಉಪ ಆರಕ್ಷಕ ಅಧೀಕ್ಷಕ ಜಯರಾಂ ಉಪಸ್ಥಿತರಿದ್ದರು.







