ಸೇನೆಯಲ್ಲಿರುವ ಮದ್ದುಗುಂಡಿಗಿಂತ ಪಟಾಕಿ ದಾಸ್ತಾನೇ ಹೆಚ್ಚಿದೆ: ಸುಪ್ರೀಂ

ಹೊಸದಿಲ್ಲಿ, ಆ. 28: ಭಾರತೀಯ ಸೇನೆಯಲ್ಲಿರುವ ಮದ್ದುಗುಂಡು ದಾಸ್ತಾನಿಗಿಂತ ನಿಮ್ಮಲ್ಲಿರುವ ಪಟಾಕಿ ದಾಸ್ತಾನೇ ಹೆಚ್ಚಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ದೇಶದ ರಾಜಧಾನಿಯ ಸುತ್ತಮುತ್ತ ದಾಸ್ತಾನು ಇರಿಸಲಾದ 50 ಲಕ್ಷ ಕೆ.ಜಿ. ಪಟಾಕಿಗಳ ಬಗ್ಗೆ ಮಾಹಿತಿ ಪಡೆದ ಬಳಿಕ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಮದನ್ ಬಿ. ಲೋಕುರ್ ಅವರನ್ನೊಳಗೊಂಡ ನ್ಯಾಯಪೀಠ, 5 ದಿನಗಳ ಕಾಲ ದೀಪಾವಳಿ ಆಚರಿಸಲಾಗುತ್ತದೆ. ಈ 5 ದಿನಗಳಲ್ಲಿ ಪ್ರತೀ ದಿನ 10 ಲಕ್ಷ ಕಿ.ಗ್ರಾಂ. ಪಟಾಕಿ ಬಳಸಲಾಗುತ್ತದೆ ಎಂದರು.
ದಿಲ್ಲಿ ಸುತ್ತಮುತ್ತ ಪೂರೈಕೆದಾರರು ಹಾಗೂ ವಿತರಣೆಗಾರರಲ್ಲಿ 50 ಲಕ್ಷ ಕಿ.ಗ್ರಾಂ. ಪಟಾಕಿ ದಾಸ್ತಾನು ಇದೆ. ದಿಲ್ಲಿಯಲ್ಲಿ ಮಾತ್ರ 1 ಲಕ್ಷ ಕಿ.ಗ್ರಾಂ. ಪಟಾಕಿ ದಾಸ್ತಾನು ಇದೆ ಎಂದು ನ್ಯಾಯವಾದಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ತಿಳಿಸಿದಾಗ ಪೀಠ ಅಚ್ಚರಿ ವ್ಯಕ್ತಪಡಿಸಿತು.
ಚೀನಾ ಪಟಾಕಿಗಳನ್ನು ನಿಷೇಧಿಸಲು ಸರಕಾರ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ತಿಳಿಸುವಂತೆ ಪೀಠ ಹೇಳಿತು.
ದೇಶಿ ಪಟಾಕಿ ಉತ್ಪಾದಕರು ವಿದೇಶಿ ಪಟಾಕಿಯ ಗುಣಮಟ್ಟ ಕಾಯ್ದುಕೊಳ್ಳಲಾಗುವುದಿಲ್ಲ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.







