ಜರ್ಮನಿ: ಕನಿಷ್ಠ 84 ರೋಗಿಗಳನ್ನು ಕೊಂದ ನರ್ಸ್

ಬರ್ಲಿನ್, ಆ. 28: ಜರ್ಮನಿಯಲ್ಲಿ ಅತಿಯಾದ ಪ್ರಮಾಣದಲ್ಲಿ ಔಷಧಗಳನ್ನು ಕೊಟ್ಟು ಹೃದಯ ರೋಗಿಗಳನ್ನು ಕೊಂದ ಅಪರಾಧಿಯಾಗಿರುವ ನರ್ಸ್, ಕನಿಷ್ಠ 84 ಮಂದಿಯನ್ನು ಈ ರೀತಿಯಲ್ಲಿ ಕೊಂದಿರಬಹುದು ಎಂಬುದಾಗಿ ಭಾವಿಸಲಾಗಿದೆ.
ಅದೇ ವೇಳೆ, ಹತ್ಯೆಗಳ ನಿಜವಾದ ಪ್ರಮಾಣ ತುಂಬಾ ಹೆಚ್ಚಾಗಿರಬಹುದು ಎಂದು ತನಿಖಾಧಿಕಾರಿಗಳು ಸೋಮವಾರ ಹೇಳಿದರು.
ಜರ್ಮನಿಯ ಡೆಲ್ಮನ್‌ಹೋರ್ಸ್ಟ್ ಪಟ್ಟಣದ ಕ್ಲಿನಿಕ್ ಒಂದರಲ್ಲಿ ನರ್ಸ್ ನೀಲ್ಸ್ ಹೋಜಲ್ ಎರಡು ಕೊಲೆಗಳು ಮತ್ತು ಎರಡು ಕೊಲೆಯತ್ನಗಳನ್ನು ನಡೆಸಿರುವುದು 2015ರಲ್ಲಿ ಸಾಬೀತಾಗಿತ್ತು. ಆದರೆ, ಆತ ಹೆಚ್ಚು ಮಂದಿಯನ್ನು ಕೊಂದಿದ್ದಾನೆ ಎಂದು ತಾವು ಭಾವಿಸಿದ್ದೇವೆ ಎಂಬುದಾಗಿ ಪ್ರಾಸಿಕ್ಯೂಟರ್‌ಗಳು ಹೇಳಿದ್ದರು. ಆತ 43 ಮಂದಿಯನ್ನು ಕೊಂದಿರಬಹುದು ಎಂಬುದಾಗಿ ಕಳೆದ ವರ್ಷ ಹೇಳಲಾಗಿತ್ತು.
ಇನ್ನೊಂದು ಪ್ರಕರಣದಲ್ಲಿ ಆತ ಕೊಲೆಯತ್ನ ನಡೆಸಿದರುವುದು ಸಾಬೀತಾದ ಬಳಿಕ ಆತ ಮಾಡಿರುವ ಅಪರಾಧಗಳು ಬೆಳಕಿಗೆ ಬಂದಿವೆ. ಅಧಿಕಾರಿಗಳು ನೂರಾರು ಸಾವುಗಳ ಬಗ್ಗೆ ತನಿಖೆ ಮಾಡಿದ್ದಾರೆ. ಅದಕ್ಕಾಗಿ ಡೆಲ್ಮನ್‌ಹೋರ್ಸ್ಟ್ ಮತ್ತು ಸಮೀಪದ ಓಲ್ಡನ್‌ಬರ್ಗ್‌ನಲ್ಲಿ ಹಳೆಯ ರೋಗಿಗಳ ದೇಹಗಳನ್ನು ಅಗೆದು ತೆಗೆದಿದ್ದಾರೆ.
ಹೋಗಲ್‌ನ ಅಪರಾಧ ಸಾಬೀತಾದ ಪ್ರಕರಣಗಳನ್ನು ಹೊರತುಪಡಿಸಿ, ಆತ ನಡೆಸಿರುವ 84 ಕೊಲೆಗಳಿಗೆ ಅಧಿಕಾರಿಗಳು ಪುರಾವೆ ಪತ್ತೆಹಚ್ಚಿದ್ದಾರೆ ಎಂದು ಓಲ್ಡನ್‌ಬರ್ಗ್ ಪೊಲೀಸ್ ಮುಖ್ಯಸ್ಥರು ಸೋಮವಾರ ತಿಳಿಸಿದರು.
ಮೃತರ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆಯಿದೆ. ಕೆಲವು ಸಂತ್ರಸ್ತರನ್ನು ಸುಡಲಾಗಿದ್ದು, ಸಾಕ್ಷ ಸಂಗ್ರಹಿಸುವುದು ಅಸಾಧ್ಯವಾಗಿದೆ ಎಂದು ಅವರು ಹೇಳಿದರು.







