ಚಿಕ್ಕಮಗಳೂರು: ನಗರದ ಘನತ್ಯಾಜ್ಯದ ನಿರ್ವಹಣೆ ಐಟಿಸಿ ಕಂಪೆನಿಯ ಮಡಿಲಿಗೆ

ಚಿಕ್ಕಮಗಳೂರು, ಆ.28: ನಗರದ ನಗರಸಭೆ ವ್ಯಾಪ್ತಿಯ ಘನತ್ಯಾಜ್ಯ ವಸ್ತುಗಳ ನಿರ್ವಹಣೆಯನ್ನು ವೈಜ್ಞಾನಿಕ ನಿರ್ವಹಣೆಯ ಚಿಕ್ಕಮಗಳೂರು ನಗರ ಸಭೆಯು 3 ವರ್ಷಗಳ ಅವಧಿಗೆ ಐಟಿಸಿ ಕಂಪೆನಿಯ ಸಹಯೋಗದೊಂದಿಗೆ ನಿರ್ವಹಿಸುವ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿತು.
ಸೋಮವಾರ ನಗರದ ನಗರಸಭೆಯ ಸಭಾಂಗಣದಲ್ಲಿ ನಡೆದ ಒಪ್ಪಂದದ ಸಂದರ್ಭದಲ್ಲಿ ಶಾಸಕ ಸಿ.ಟಿ.ರವಿ ನಗರ ಸಭೆ ಅಧ್ಯಕ್ಷೆ ಕವಿತಾ ಶೇಖರ್, ಉಪಾಧ್ಯಕ್ಷ ರವಿಂದ್ರಪ್ರಭು ಜಿಲ್ಲಾಧಿಕಾರಿ ಜಿ. ಸತ್ಯವತಿ, ನಗರಾಭಿವೃದ್ಧಿ ಕೋಶದ ಅಧಿಕಾರಿ ಬಿ.ಕೆ. ರುದ್ರಮುನಿ, ನಗರ ಸಭೆ ಆಯುಕ್ತೆ ತುಷಾರಮಣಿ ಐಟಿಸಿ ಕಂಪೆನಿಯ ಅಧಿಕಾರಿ ಅಪ್ಸರ್ ಅಹ್ಮದ್ ರಮಾಕಾಂತ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.
ನಗರದ 35 ವಾರ್ಡ್‍ಗಳ ವ್ಯಾಪ್ತಿಯ ಘನತ್ಯಾಜ್ಯವನ್ನು ಐಟಿಸಿ ಕಂಪೆನಿಯು ತನ್ನ ಸಿಎಸ್ ಆರ್ ಫಂಡ್‍ನ್ನು ವಿನಿಯೋಗಿಸಿ ಸ್ವಂತ ಖರ್ಚಿನಲ್ಲಿಯೇ ಪ್ರತಿಯೊಂದು ಮನೆ ಮನೆಗಳಿಂದ ಅವುಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಅವುಗಳನ್ನು ನಿರ್ವಹಿಸುವ ಜವಾಬ್ದಾರಿಯಾಗಿದ್ದು ಇದರಿಂದ ನಗರ ಸಭೆಗೆ ಆದಾಯ ಉಳಿತಾಯವಾಗಲಿದೆ.
ಒಪ್ಪಂದದ ಪ್ರಕಾರ ಇವುಗಳ ನಿರ್ವಹಣೆಗೆ ಕಂಪೆನಿಯು ನಗರ ಸಭೆ ವ್ಯಾಪ್ತಿಯ ನಾಗರಿಕರಿಗೆ ಒಂದು ತಿಂಗಳ ವರೆಗೆ ತರಬೇತಿ ನೀಡಿ ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸುವ ಬಗ್ಗೆ ಅರಿವು ಮೂಡಿಸಲಿದೆ, ವಿಶೇಷವಾಗಿ ಸಾರ್ವಜನಿಕರು ಮೂಲದಲ್ಲಿಯೇ ಕಸಗಳ ವಿಂಗಡನೆಗೆ ಹೆಚ್ಚು ಒತ್ತು ನೀಡಲಿದೆ. ಇವುಗಳಿಗೆ ಸಿಬ್ಬಂದಿಯ ಜವಾಬ್ದಾರಿಯನ್ನು ಕಂಪೆನಿ ನಿರ್ವಹಿಸಲಿದೆ.







