ತಲೆಬುರುಡೆ ರಹಿತ ಶಿಶುವಿನ ಗರ್ಭಪಾತಕ್ಕೆ ಸುಪ್ರೀಂ ಮೊರೆ ಹೋದ ಮಹಿಳೆ

ಹೊಸದಿಲ್ಲಿ, ಆ. 28: ತಲೆಬುರುಡೆ ಇಲ್ಲದ 24 ವಾರದ ಭ್ರೂಣ ಎನ್ನುವ ನೆಲೆಯಲ್ಲಿ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಕೋರಿ ಮಹಿಳೆಯೋರ್ವರು ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ವೈದ್ಯಕೀಯ ಮಂಡಳಿ ರೂಪಿಸುವಂತೆ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಎಸ್. ಎ. ಬೋಬ್ಡೆ ಅವರನ್ನೊಳಗೊಂಡ ಪೀಠ ಪುಣೆ ಮೂಲದ ಬಿ.ಜೆ. ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಮಂಡಳಿ ರೂಪಿಸುವಂತೆ ನಿರ್ದೇಶಿಸಿದೆ. ಹಾಗೂ 20ರ ಹರೆಯದ ಮಹಿಳೆಯ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಆದೇಶಿಸಿದೆ.
20 ವಾರಗಳ ಬಳಿಕ ಭ್ರೂಣದ ಗರ್ಭಪಾತವನ್ನು ಎಂಟಿಪಿ ಕಾಯ್ದೆಯ 3(2)ಬಿ ಸೆಕ್ಷನ್ ನಿಷೇಧ ವಿಧಿಸಿದೆ.
ಮಂಡಳಿ ದೂರುದಾರಳನ್ನು ಪರಿಶೀಲಿಸಬೇಕು ಹಾಗೂ ಅವರ ಪರಿಸ್ಥಿತಿ, ಕೂಡಲೇ ಗರ್ಭಪಾತಕ್ಕೆ ಅನುಮತಿ ನೀಡುವ ಸಂದರ್ಭ ನೀಡಬೇಕಾದ ಸಲಹೆಗಳ ಬಗ್ಗೆ ವರದಿ ನೀಡಬೇಕು ಎಂದು ಪೀಠ ಹೇಳಿದೆ ಹಾಗೂ ಮುಂದಿನ ವಿಚಾರಣೆಯನ್ನು ಆಗಸ್ಟ್ 31ಕ್ಕೆ ನಿಗದಿಪಡಿಸಬೇಕು.
ಶಿಶುವಿನ ತಲೆಬುರುಡೆ ರೂಪುಗೊಂಡಿಲ್ಲ. ಈ ಶಿಶು ಸಜೀವವಾಗಿ ಜನಿಸಿದರೆ, ಬದುಕಿ ಉಳಿಯಲಾರದು. ಆದುದರಿಂದ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಮಹಿಳೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.







