ರೈತರು ಸರಕಾರದ ಸೌಲಭ್ಯ ಪಡೆದು ಕೃಷಿ ಚಟುವಟಿಕೆಯಲ್ಲಿ ಅಭಿವೃದ್ಧಿಕಾಣಬೇಕು: ಸಂಸದ ಸಿದ್ದೇಶ್ವರ್

ದಾವಣಗೆರೆ, ಆ.28: ಪ್ರಧಾನಿ ಮೋದಿ ಬರುವ ಐದು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಯೋಜನೆ ರೂಪಿಸಿದ್ದು, ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರದ ಜೊತೆಗೆ ಕೃಷಿಕರು ಕೈಜೋಡಿಸಬೇಕೆಂದು ಸಂಸದ ಜಿ.ಎಂ. ಸಿದ್ದೇಶ್ವರ್ ತಿಳಿಸಿದರು.
ನಗರದ ತರಳಬಾಳು ಕೃಷಿ, ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸುಜಲಾ ಯೋಜನೆ (ತೋಟಗಾರಿಕೆ ಇಲಾಖೆ) ಮೀನುಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಹಾಗೂ ರೇಷ್ಮೆ ಇಲಾಖೆ ಇವುಗಳ ಸಹಯೊಗದೊಂದಿಗೆ ಏರ್ಪಡಿಸಿದ್ದ ನವಭಾರತ ಮಂಥನ: ಸಂಕಲ್ಪದಿಂದ ಸಿದ್ಧಿ-2022 ಜನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರು ಕೃಷಿ ವೆಚ್ಚವನ್ನು ತಗ್ಗಿಸುವ ಮೂಲಕ ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರದ ಜೊತೆಗೆ ಕೈಜೋಡಿಸಬೇಕೆಂದ ಅವರು, ರೈತರ ಬದುಕು ಹಸನಾಗಬೇಕಾದರೆ, ಉತ್ತಮವಾಗಿ ಮಳೆಯಾಗಬೇಕಾಗಿದೆ. ಅಲ್ಲದೆ, ಸಮರ್ಪಕ ವಿದ್ಯುತ್ ಸೌಲಭ್ಯ, ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರಬೇಕಾಗಿದೆ. ಇವುಗಳನ್ನು ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಆದ್ದರಿಂದ ರೈತರು ನಿಮ್ಮ ಹಕ್ಕಾಗಿರುವ ಸರ್ಕಾರಿ ಸೌಲಭ್ಯ ಪಡೆದು ಶ್ರಮ ವಹಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿ ಬದುಕು ಹಸನು ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಫಸಲ್ ಬಿಮಾ ಯೋಜನೆಯಡಿ 25 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದು, 40 ಕೋಟಿ ರೂ. ಬೆಳೆವಿಮೆ ಜಿಲ್ಲೆಗೆ ಬಿಡುಗಡೆಯಾಗಿದ್ದು, ಈ ಪೈಕಿ ಮೂವತ್ತೆರಡೂವರೆ ಕೋಟಿ ರೂ. ಹಣವನ್ನು ಮಾತ್ರ ರೈತರಿಗೆ ವಿತರಿಸಲಾಗಿದ್ದು, ಇನ್ನೂ ಉಳಿದ ಸುಮಾರು ಏಳುವರೆ ಕೋಟಿ ರೂ. ಬೆಳೆ ವಿಮೆಯನ್ನು ರೈತರಿಗೆ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬ್ಯಾಂಕ್ ಅಧಿಕಾರಿಗಳು, ವಿಮಾ ಕಂಪೆನಿಗಳ ಮೇಲೆ, ವಿಮಾ ಕಂಪೆನಿಗಳು ರಾಜ್ಯ ಸರ್ಕಾರದ ವಿರುದ್ಧ ಬೊಟ್ಟು ಮಾಡುತ್ತಿರುವುದು. ಸರಿಯಲ್ಲ ತಕ್ಷಣವೇ ಬೆಳೆವಿಮೆ ಹಣವನ್ನು ಆಯಾ ರೈತರ ಖಾತೆಗಳಿಗೆ ಜಮಾ ಮಾಡಬೇಕೆಂದು ತಾಕೀತು ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ರೈತರ ವಾರ್ಷಿಕ ವರಮಾನ ದ್ವಿಗುಣ ಆಗಬೇಕೆಂದರೆ, ಬರೀ ಖರ್ಚು ಕಡಿಮೆ ಮಾಡಿದರೆ ಸಾಲದು. ಇದಕ್ಕೆ ಪ್ರಕೃತಿಯ ಸಹಕಾರವುಬೇಕು. ಆದರೆ, ಈ ಬಾರಿ ಹಸಿ ಮಳೆ ಆಗಿಲ್ಲ. ಹಾಕಿದ ಬೀಜವೂ ಮೊಳಕೆಯಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮಳೆಯಾಗದ ಸಂದರ್ಭದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಚಿಂತನೆ ನಡೆಸಬೇಕು. ಅಲ್ಲದೆ, ರೈತರು ಮೆಕ್ಕೆಜೋಳ, ಭತ್ತ ಬೆಳೆಗೆ ಸೀಮಿತವಾಗದೇ, ಬಹು ಬೆಳೆ ಪದ್ಧತಿ ಅನುಸರಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂದು ಕಿವಿಮಾತು ಹೇಳಿದರು.
ಶಾಸಕ ಕೆ.ಶಿವಮೂರ್ತಿ ಮಾತನಾಡಿ, ಕೃಷಿ ಒಂದು ಕುಲ, ರೈತರು ನಮ್ಮ ದೇಶದ ಪ್ರತೀಕ ಎಂಬ ಕೃಷಿ ನೀತಿಯಾಗಬೇಕು. ಈ ನೀತಿಯು ರೈತ, ಹೊಲ, ಕೃಷಿ ಉತ್ಪನ್ನಗಳ ದರ ಸೇರಿದಂತೆ ರೈತರಿಗೆ ಬೇಕಾದ ಎಲ್ಲ ಮೂಲಭೂತ ಸೌಲಭ್ಯವನ್ನು ಒಳಗೊಂಡಿರಬೇಕು. ಇದಕ್ಕೆ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿದರು. ಕೃಷಿಕ ಸಮಾಜದ ಕುಂದೂರು ಹನುಮಂತಪ್ಪ, ಪ್ರಧಾನ ವಿಜ್ಞಾನಿ ಡಾ. ಚಂದ್ರೇಗೌಡ, ವಿಸ್ತರಣಾ ನಿರ್ದೇಶಕ ಡಾ.ಟಿ.ಎಚ್. ಗೌಡ, ಜಿಪಂ ಸದಸ್ಯರುಗಳಾದ ಶೈಲಜಾ ಬಸವರಾಜ್, ಸಾಕಮ್ಮ, ಸುವರ್ಣ ಆರುಂಡಿ ನಾಗರಾಜ್, ದೀಪಾ ಜಗದೀಶ್, ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಂ.ಕೆ.ರೇಣುಕಾರ್ಯ, ಜಂಟಿ ಕೃಷಿ ನಿರ್ದೇಶಕ ಸದಾಶಿವ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ, ಅರಣ್ಯ ಅಧಿಕಾರಿ ಮಂಜುನಾಥ್, ಡಾ.ರಾಘವೇಂದ್ರ ಪ್ರಸಾದ್ ಉಪಸ್ಥಿತರಿದ್ದರು. ತರಳಬಾಳು ವಿಜ್ಞಾನ ಕೇಂದ್ರದ ಡಾ.ದೇವರಾಜ್ ಪ್ರಾರ್ಥಿಸಿ, ಸ್ವಾಗತಿಸಿದರು.







