ಸೆಪ್ಟಂಬರ್ 1ರಂದು ‘ಹ್ಯಾಪಿ ಜರ್ನಿ’ ತೆರೆಗೆ

ಮಂಗಳೂರು, ಆ.29: ಶ್ರೀ ಸಾಯಿ ಕರೀಶ್ಮಾ ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಕರೀಶ್ಮಾ ಆರ್. ಶೆಟ್ಟಿ ನಿರ್ಮಾಣದ ನೂತನ ಚಲನಚಿತ್ರ ‘ಹ್ಯಾಪಿ ಜರ್ನಿ’ ಸೆಪ್ಟಂಬರ್ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ರವಿ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಇದು ಕೌಟುಂಬಿಕ- ಆ್ಯಕ್ಷನ್ ಚಿತ್ರವಾಗಿದ್ದು, ಮಡಿಕೇರಿ, ಸಕಲೇಶಪುರ, ಬೆಂಗಳೂರು ಮತ್ತಿತರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. 40-45 ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಿರ್ದೇಶಕ ಶ್ಯಾಂ ಶಿವಮೊಗ್ಗ ಮಾತನಾಡಿ, ಇದು ಸತ್ಯ ಘಟನೆ ಆಧಾರಿತ ಚಿತ್ರವಾಗಿದ್ದು, ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುವ ಏಳು ಮಂದಿಯ ಕತೆಯಾಗಿದೆ ಎಂದರು.
ನಟ ನವೀನ್ ಡಿ. ಪಡೀಲ್ ಮಾತನಾಡಿ, ತುಳುನಾಡಿನ ಅನೇಕ ಮಂದಿ ಕನ್ನಡ ಚಿತ್ರ ಮಾಡಿದರೆ ತುಳು ಕಲಾವಿದರನ್ನು ಬಳಸಿಕೊಳ್ಳುವುದಿಲ್ಲ. ಆದರೆ ಈ ಚಿತ್ರದಲ್ಲಿ ತುಳು ಕಲಾವಿದರಿಗೆ ಅವಕಾಶ ನೀಡಲಾಗಿದೆ ಎಂದರು.
ನಟಿ ಅಮಿತಾ ಕುಲಾಲ್, ನಟ ಮನೋಜ್ ಪುತ್ತೂರು, ಸಂಗೀತ ನಿರ್ದೇಶಕ ಎಸ್.ಪಿ. ಚಂದ್ರಕಾಂತ್, ಸಹ ನಿರ್ದೇಶಕ ಸಚಿನ್ ಎಸ್. ಕುಂಬ್ಳೆ ಇದ್ದರು.







