ಶಾಲೆಗಳಿಗೆ ಬೆಂಚ್ ಪೂರೈಕೆಯಾಗಿದೆ ಎಂದು ತಪ್ಪು ಮಾಹಿತಿ ನೀಡಿ ತಬ್ಬಿಬ್ಬುಗೊಂಡ ಡಿಡಿಪಿಐ!
ಶಿವಮೊಗ್ಗ, ಆ. 29: ಶಾಲೆಗಳಿಗೆ ಬೆಂಚ್ ಪೂರೈಕೆಯಾಗಿದೆ ಎಂದು ತಪ್ಪು ಮಾಹಿತಿ ನೀಡಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಡಿಡಿಪಿಐ)ರು ಸದಸ್ಯರ ಟೀಕೆಗೆ ಗುರಿಯಾದ ಘಟನೆ ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಜಿಲ್ಲಾ ವಲಯ ಯೋಜನಾ ಕಾರ್ಯಕ್ರಮದಡಿ ಸರ್ಕಾರಿ ಪ್ರೌಢಶಾಲೆಗಳಿಗೆ ಸಾಧನ ಸಾಮಗ್ರಿ ಸರಬರಾಜು ಆದೇಶ ನೀಡಲಾಗಿತ್ತು. ಅದರಂತೆ ಬೆಂಚ್‍ಗಳ ಕೊರತೆಯಿದ್ದ ಶಾಲೆಗಳನ್ನು ಗುರುತಿಸಿ ಬೆಂಚ್ ಪೂರೈಕೆ ಮಾಡುವಂತೆಯೂ ಸೂಚಿಸಲಾಗಿತ್ತು. ಆದರೆ ತಮ್ಮ ಕ್ಷೇತ್ರ ವ್ಯಾಪ್ತಿಯ ಶಾಲೆಗಳಿಗೆ ಬೆಂಚ್ ಪೂರೈಕೆಯಾಗಿಲ್ಲವೆಂದು ಸದಸ್ಯೆ ಶ್ವೇತಾ ಬಂಡಿಯವರು ದೂರಿದರು.
ಆದರೆ ಸಭೆಗೆ ಡಿಡಿಪಿಐ ನೀಡಿದ್ದ ಮಾಹಿತಿಯಲ್ಲಿ ಎಲ್ಲ ಶಾಲೆಗಳಿಗೆ ಬೆಂಚ್ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದರು. ಈ ಕುರಿತಂತೆ ಬಿಸಿ ಬಿಸಿ ಚರ್ಚೆಯೂ ನಡೆಯಿತು. ಸದಸ್ಯ ಹೆಚ್.ಸಿ.ಯೋಗೀಶ್‍ರವರು ಬೆಂಚ್ ಪೂರೈಕೆಯಾಗದೆ, ಪೂರೈಸಲಾಗಿದೆ ಎಂದು ಮಾಹಿತಿ ನೀಡಿದ್ದು ಸರಿಯಲ್ಲವೆಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಸಿಇಓರವರು ಮಾತನಾಡಿ, 'ಎಲ್ಲ ಶಾಲೆಗಳಿಗೂ ಸಾಮಗ್ರಿ ಪೂರೈಕೆಯಾಗಿರುವುದನ್ನು ಖಚಿತಪಡಿಸಿಕೊಂಡಿದ್ದಿರಾ?' ಎಂದು ಪ್ರಶ್ನಿಸಿದರು. ಇದಕ್ಕೆ ಡಿಡಿಪಿಐರಿಂದ ಸ್ಪಷ್ಟ ಉತ್ತರ ದೊರಕಲಿಲ್ಲ. ಇದರಿಂದ ಅಸಮಾಧಾನಗೊಂಡ ಸಿಇಓರವರು, ಖಚಿತಪಡಿಸಿಕೊಳ್ಳದೆ ವರದಿ ಕೊಟ್ಟಿದ್ದು ಏಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಎಲ್ಲ ಶಾಲೆಗಳಿಗೂ ಒಂದೇ ಏಜೆನ್ಸಿಯವರು ಬೆಂಚ್ ಪೂರೈಕೆ ಮಾಡುತ್ತಿದ್ದಾರೆ ಎಂದು ಡಿಡಿಪಿಐ ಸಭೆಯ ಗಮನಕ್ಕೆ ತಂದರು. ಹೆಚ್.ಸಿ.ಯೋಗೀಶ್ ಮಾತನಾಡಿ, 'ಬಿಇಓಗಳು ನೀಡಿದ ಮಾಹಿತಿಯನ್ನು ಡಿಡಿಪಿಐ ಸಭೆಗೆ ನೀಡಿದ್ದಾರೆ. ತಪ್ಪು ಮಾಹಿತಿ ನೀಡಿದ ಬಿಇಓಗಳ ವಿರುದ್ದ ಶಿಸ್ತುಕ್ರಮ ಜರುಗಿಸಬೇಕು' ಎಂದು ಅಧ್ಯಕ್ಷರಿಗೆ ಆಗ್ರಹಿಸಿದರು.
ಸಿಇಓ ಮಾತನಾಡಿ, ಈ ಕುರಿತಂತೆ ಬಿಇಓಗಳಿಂದ ಮತ್ತೆ ವರದಿ ತರಿಸಿಕೊಳ್ಳಲಾಗುವುದು. ತಪ್ಪು ಮಾಹಿತಿ ನೀಡಿದ್ದು ಕಂಡುಬಂದರೆ ಕ್ರಮ ಜರುಗಿಸಲಾಗುವುದು ಎಂದು ಸಭೆಗೆ ಸ್ಪಷ್ಪಪಡಿಸಿದರು.







