ಪಿಎಫ್ ಐ, ಕೆಎಫ್ ಡಿ ಸಂಘಟನೆ ನಿಷೇಧಿಸಲು ಆಗ್ರಹಿಸಿ ಸೆ.7 ರಂದು ಮಂಗಳೂರು ಚಲೋ
ಬೆಂಗಳೂರು, ಆ.29: ರಾಜ್ಯಾದ್ಯಂತ ಹಿಂದೂ ಮುಖಂಡರ ಹತ್ಯೆ ಖಂಡಿಸಿ ಪಿಎಫ್ ಐ, ಕೆಎಫ್ ಡಿ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು ಹಾಗೂ ಇದುವರೆಗೂ ಹತ್ಯೆಯಾದ ಹಿಂದು ಮುಖಂಡರ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಬಿಜೆಪಿ ಯುವಮೋರ್ಚಾದಿಂದ ಸೆ.7 ರಂದು ಮಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ತಮ್ಮೇಶಗೌಡ, ಮಂಗಳೂರು ಚಲೋ ಅಂಗವಾಗಿ ಸೆ.5 ರಿಂದ ರಾಜ್ಯದ 5 ದಿಕ್ಕುಗಳಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಮೈಸೂರು, ಶಿವಮೊಗ್ಗ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಚಿಕ್ಕಮಗಳೂರಿನಿಂದ ಹೊರಟು ಬೈಕ್ ರ್ಯಾಲಿ ನಡೆಸುವ ಕಾರ್ಯಕರ್ತರು ಸೆ.7ರಂದು ಮಂಗಳೂರು ಬಂದು ತಲುಪಲಿದ್ದಾರೆ ಎಂದು ಹೇಳಿದರು.
ಸೆ.5ರಂದು ಬೆ.10.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶಾಸಕ ಆರ್.ಅಶೋಕ್, ಹುಬ್ಬಳ್ಳಿಯಿಂದ ಹೊರಡುವ ರ್ಯಾಲಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ್ ಜೋಶಿ ಚಾಲನೆ ನೀಡುತ್ತಾರೆ. ಸೆ.6ರಂದು ಶಿವಮೊಗ್ಗದಿಂದ ಹೊರಡುವ ರ್ಯಾಲಿಗೆ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಬಿ.ವೈ.ರಾಘವೇಂದ್ರ, ರುದ್ರೇಗೌಡ ಹಾಗೂ ಮೈಸೂರಿನಿಂದ ಹೊರಡುವ ರ್ಯಾಲಿಗೆ ಸಂಸದ ಪ್ರತಾಪ್ ಸಿಂಹ, ಚಿಕ್ಕಮಗಳೂರಿನ ರ್ಯಾಲಿಗೆ ಶಾಸಕ ಸಿ.ಟಿ.ರವಿ ಚಾಲನೆ ನೀಡಲಿದ್ದಾರೆ ಎಂದರು.
ರಾಜ್ಯದ ವಿವಿಧ ಭಾಗಗಳಿಂದ ಸೆ.7 ರಂದು ಮಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸಿ, ಸಭೆಯನ್ನು ಮಾಡಲಾಗುತ್ತದೆ. ಈ ಪ್ರತಿಭಟನಾ ಸಭೆಗೆ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.







