ಆ. 31: ಆಧಾರ್-ಪಾನ್ ಜೋಡಣೆಗೆ ಅಂತಿಮ ದಿನವೇ?

ಹೊಸದಿಲ್ಲಿ, ಆ. 30: ಖಾಸಗಿತನ ಎಲ್ಲ ಭಾರತೀಯರ ಮೂಲಭೂತ ಹಕ್ಕು ಎಂದು ಕಳೆದ ವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಅನ್ನು ಜೋಡಿಸಲು ಕೊನೆ ದಿನಾಂಕವಾದ ಆಗಸ್ಟ್ 1ರ ಬಗ್ಗೆ ಅಧಿಕಾರಿಗಳು ಖಚಿತವಾಗಿ ಏನನ್ನೂ ಹೇಳುತ್ತಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಆಧಾರ್ ಕಾರ್ಡ್ ಪ್ರಕರಣದ ವಿಚಾರಣೆ ಇನ್ನಷ್ಟೇ ನಡೆಯಬೇಕಾಗಿರುವುದರಿಂದ ಅಂತಿಮ ಗಡುವನ್ನು ವಿಸ್ತರಿಸಬೇಕಾಗಿದೆ ಎಂಬ ವದಂತಿ ಬಗ್ಗೆ ಮಂಗಳವಾರ ಪ್ರಶ್ನಿಸಿದಾಗ ಆದಾಯ ತೆರಿಗೆ ಅಧಿಕಾರಿಯೊಬ್ಬರು ಅದನ್ನು ಇಷ್ಟು ಬೇಗ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಖಾಸಗಿತನ ಮೂಲಭೂತ ಹಕ್ಕು ಎನ್ನುವ ಸುಪ್ರೀಂ ಕೋರ್ಟ್‌ನ ಆಗಸ್ಟ್ 24ರ ತೀರ್ಪಿನಿಂದ ಬಯೋಮೆಟ್ರಿಕ್ ಆಧಾರವಾಗಳುಳ್ಳ ಗುರುತು ವ್ಯವಸ್ಥೆ ಆಧಾರ್ ಅನ್ನು ಅನುಷ್ಠಾನಗೊಳಿಸುವುದು ಕಾನೂನಿಗೆ ಸವಾಲಾಗಿದೆ. ಆಧಾರ್ ಯೋಜನೆ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆಯೇ ಎಂಬ ಬಗ್ಗೆ ಪ್ರತ್ಯೇಕ ನ್ಯಾಯಮೂರ್ತಿಗಳ ಪೀಠದ ಮುಂದೆ ಶೀಘ್ರ ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಆಧಾರ್-ಪಾನ್ ಜೋಡಿಸಬೇಕೆನ್ನುವ ಸರಕಾರದ ಆದೇಶಕ್ಕೆ ಉಂಟಾದ ಹಿನ್ನಡೆಯನ್ನು ನಿರ್ಣಯಿಸಲು ಆದಾಯ ತೆರಿಗೆ ಅಧಿಕಾರಿಗಳು ಅಧ್ಯಯನ ನಡೆಸುತ್ತಿದ್ದಾರೆ. ಆಧಾರ್ ಹಾಗೂ ಪಾನ್ ಜೋಡಣೆಯು ಕಡ್ಡಾಯಗೊಳಿಸುವುದು ಕಾನೂನಾತ್ಮಕವಾಗಿ ಸಮರ್ಥನೀಯವೇ ಎಂಬ ಬಗ್ಗೆ ಪರಿಶೀಲಿಸಲು ನಾವು ಸುಪ್ರೀಂ ಕೋರ್ಟ್‌ನ ತೀರ್ಪು ಓದುತ್ತಿದ್ದೇವೆ ಹಾಗೂ ಕಾನೂನು ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಆದಾಯ ತೆರಿಗೆ ಇಲಾಖೆಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







