ವ್ಯವಹಾರ ಜ್ಞಾನದಿಂದ ಉತ್ತಮ ಜೀವನ ನಿರ್ವಹಣೆ ಸಾಧ್ಯ: ಡಾ.ಹೆಗ್ಗಡೆ

ಉಡುಪಿ, ಆ. 29: ವ್ಯವಹಾರ ಜ್ಞಾನದಿಂದ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ. ರೈತರು ವ್ಯವಸ್ಥಿತವಾಗಿ ವ್ಯವಹಾರ ನಡೆಸಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಎದುರಾಗುವುದಿಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ತಾಲೂಕು, ಪ್ರಗತಿ ಬಂಧು ಸ್ವಸಹಾಯ ಸಂಘ ಒಕ್ಕೂಟಗಳ ಉಡುಪಿ ಕೇಂದ್ರ ಸಮಿತಿಯ ಆಶ್ರಯ ದಲ್ಲಿ 4050 ಸ್ವಸಹಾಯ ಸಂಘಗಳನ್ನು ಒಳಗೊಂಡ 139 ಒಕ್ಕೂಟಗಳ ಕೇಂದ್ರ ಸಮಿತಿಯ ಪದಗ್ರಹಣ ಹಾಗೂ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಂದು ಗೌರವಯುತ ಸ್ಥಾನದಲ್ಲಿರುವ ಮಹಿಳೆಯರು ಸಂಸಾರ ಹಾಗೂ ಸಮಾಜವನ್ನು ಸಮಾನವಾಗಿ ನಡೆಸಿಕೊಂಡು ಹೋಗಬೇಕು. ಮಹಿಳೆಯರಲ್ಲಿ ಸ್ವಾಭಿಮಾನ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸ್ವಸಹಾಯ ಸಂಘಗಳಲ್ಲಿ ನಾನು ಎಂಬುದನ್ನು ಬಿಟ್ಟು ನಾವು ಎಂಬ ಭಾವನೆ ಎಲ್ಲರಲ್ಲಿ ಬರೇಕಾಗಿದೆ ಎಂದು ಅವರು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ರಾಜ್ಯದಲ್ಲಿ 1500ಕೋಟಿ ಹಾಗೂ ಉಡುಪಿ ತಾಲೂಕಿನಲ್ಲಿ 39ಕೋಟಿ ರೂ. ಉಳಿತಾಯ ಮಾಡಲಾ ಗಿದೆ. 160ಕೋಟಿ ರೂ. ಬ್ಯಾಂಕಿನಲ್ಲಿ ಚಾಲ್ತಿಯಲ್ಲಿದೆ ಎಂದ ಅವರು, ಇಂದು ಪ್ರಕೃತಿಯ ನಾಶ ಹಾಗೂ ಪ್ರಕೃತಿ ವಿರೋಧಿ ಕೆಲಸದಿಂದ ದೇಶದೆಲ್ಲೆಡೆ ಬರಗಾಲ ಆವರಿಸಿದೆ. ಈ ನಿಟ್ಟಿನಲ್ಲಿ ಮಳೆಕೊಯ್ಲು ಯೋಜನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸವನ್ನು ಯೋಜನೆ ಮಾಡುತ್ತಿದೆ ಎಂದರು.
ಲಾಭಾಂಶ ವಿತರಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ರಾಜ್ಯದ 6200 ಗ್ರಾಪಂಗಳ ಪೈಕಿ ಅಭಿವೃದ್ಧಿಯ ಸಮೀಕ್ಷೆಯಲ್ಲಿ ಮೊದಲ 250 ಗ್ರಾಪಂಗಳು ಅವಿಭಜಿತ ದ.ಕ. ಜಿಲ್ಲೆಯದ್ದಾಗಿವೆ. 2018ರ ಅ.2ರೊಳಗೆ ಉಡುಪಿಯನ್ನು ಕಸ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದು, ಇದಕ್ಕೆ ಸ್ವಸಹಾಯ ಸಂಘಗಳ ಸಹಕಾರ ಅಗತ್ಯ. ಈ ಯೋಜನೆಯಿಂದ ಮಹಿಳೆಯರಿಗೆ ಪುರುಷರನ್ನು ಮೀರಿಸುವ ಶಕ್ತಿ ಬಂದಿದೆ ಎಂದು ಹೇಳಿದರು.
ಮಳೆಕೊಯ್ಲು ಅನುದಾನವನ್ನು ಉಡುಪಿ ನಗರಸಭೆ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ ವಿತರಿಸಿದರು. ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಐಡಿಬಿಐ ಬ್ಯಾಂಕಿನ ಉಡುಪಿ ಶಾಖೆಯ ಪ್ರಬಂಧಕ ಪರಶುರಾಮ ಮುಖ್ಯ ಅತಿಥಿಗಳಾಗಿದ್ದರು.
ವೇದಿಕೆಯಲ್ಲಿ ಅಪ್ಪಣ್ಣ ಹೆಗ್ಡೆ, ಬಿ.ವಿ. ಪೂಜಾರಿ, ಮಹಾಬಲ ಅಜ್ರಿ, ರಮೇಶ್ ಕಾಂಚನ್, ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಬಿ.ಗಣೇಶ್ ಆಚಾರ್ಯ, ನೂತನ ಅಧ್ಯಕ್ಷ ಗಜಾನಂದ ಎಸ್.ಕುಂದರ್ ಉಪಸ್ಥಿತರಿದ್ದರು.
ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ. ಸ್ವಾಗತಿಸಿದರು. ಯೋಜನಾಧಿಕಾರಿ ಮಾಲತಿ ದಿನೇಶ್ ವರದಿ ವಾಚಿಸಿದರು. ಅಚ್ಚುತ ವಂದಿಸಿದರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.







