‘ಹಿಂದೂ ಪಾಕಿಸ್ತಾನ’ ನಿರ್ಮಾಣಕ್ಕೆ ಸಂಚು: ಪ್ರೊ.ಯೋಗೇಂದ್ರ ಯಾದವ್

ಬೆಂಗಳೂರು, ಆ.29: ಕೆಲ ಶಕ್ತಿಗಳು ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಹಿಂದೂ ಪಾಕಿಸ್ತಾನ ದೇಶ ನಿರ್ಮಾಣಕ್ಕೆ ಮುಂದಾಗಿವೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಯೋಗೇಂದ್ರ ಯಾದವ್ ಹೇಳಿದ್ದಾರೆ.
ಮಂಗಳವಾರ ನಗರದ ಗಾಂಧಿಭವನದಲ್ಲಿ ಸ್ವರಾಜ್ ಇಂಡಿಯಾ ಕರ್ನಾಟಕ ಹಮ್ಮಿಕೊಂಡಿದ್ದ ನಮ್ಮ ಪ್ರಜಾತಂತ್ರ ಎದುರಿಸುತ್ತಿರುವ ಸವಾಲುಗಳು ಕುರಿತ ಸಂವಾದವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ದಲಿತ, ಅಲ್ಪಸಂಖ್ಯಾತರ ಮೇಲೆ ಉದ್ದೇಶ ಪೂರ್ವಕವಾಗಿ ದಾಳಿಗಳು ನಡೆಯುತ್ತಿವೆ. ಇದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದ್ದು, ಹಿಂದೂ ಪಾಕಿಸ್ತಾನ ನಿರ್ಮಿಸಲು ಕೆಲವರು ಮುಂದಾಗಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಯ ನಾಟಕ ಆಡುತ್ತಿದ್ದಾರೆ. ಸಮಾಜ ಕಟ್ಟಕಡೆಯ ವ್ಯಕ್ತಿಗೆ ಯಾವುದೇ ಸರಕಾರಿ ಯೋಜನೆ, ಕಾರ್ಯಕ್ರಮ ಮುಟ್ಟಿಲ್ಲ. ಹಣದ ಶಕ್ತಿ ಇರುವವರಿಗೆ ಮಾತ್ರ ರಾಜಕೀಯ ಬಲ ಇದೆ. ಕೆಲ ರಾಜಕೀಯ ಪಕ್ಷಗಳು ದಲಿತರ ಮತ್ತು ರೈತರ ಬಗ್ಗೆ ನಾಟಕೀಯ ಪ್ರೀತಿ ತೋರಿಸುತ್ತಾರೆ ವಿನಃ, ಅವರ ಶಾಶ್ವತ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಆರೋಪಿಸಿದರು.
ಮೋದಿ ಕುರ್ಚಿ: ಕಾಂಗ್ರೆಸ್ ನಾಯಕತ್ವ ರಾಹುಲ್ ಗಾಂಧಿ ಕೈಯಲ್ಲಿ ಇರುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರ ಕುರ್ಚಿ ಗಟ್ಟಿಯಾಗಿರುತ್ತದೆ ಎಂದು ವ್ಯಂಗ್ಯವಾಡಿದ ಅವರು, ಪ್ರಾದೇಶಿಕ ಪಕ್ಷಗಳ ಬಲ ಹೆಚ್ಚಾಗಬೇಕು. ಆಗ ಮಾತ್ರ ಪ್ರತಿಯೊಂದು ರಾಜ್ಯವೂ ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯ ಎಂದು ಯೋಗೇಂದ್ರ ಯಾದವ್ ನುಡಿದರು.
ಕರ್ನಾಟಕ ಜಾತ್ಯತೀತ, ಪ್ರಗತಿಪರ ರಾಜ್ಯವಾಗಿದೆ. ಇಲ್ಲಿನ ಸಿದ್ಧಾಂತ ಮತ್ತು ಹೋರಾಟಗಳು ದೇಶದ ಮೇಲೆ ಪರಿಣಾಮ ಬೀರಿವೆ. ಹೀಗಾಗಿ, ಸ್ವರಾಜ್ ಇಂಡಿಯಾ ಕಾರ್ಯಕರ್ತರು, ಪಕ್ಷದ ಸಿದ್ಧಾಂತ, ಗುರಿಯನ್ನು ಪ್ರತಿಯೊಬ್ಬರಿಗೂ ಮುಟ್ಟಿಸಬೇಕು. ಪರ್ಯಾಯ ರಾಜಕಾರಣ ಏಕೆ ಬೇಕೆಂದು ವಿವರಿಸುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರ ಮಹದೇವ, ಶಾಸಕ ಪುಟ್ಟಣ್ಣಯ್ಯ, ಸ್ವರಾಜ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಜಿತ್ ಝಾ, ರೈತಪರ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ, ಸ್ವರಾಜ್ ಇಂಡಿಯಾ ಕರ್ನಾಟಕದ ಸಂಘಟನಾ ಸಂಚಾಲಕರಾದ ಅಮ್ಜದ್ ಪಾಷಾ, ನಾಗರಾಜ್, ಪಿ.ಗೋಪಾಲ್, ಪ್ರತಿಮಾ ಆರ್.ನಾಯ್ಕಾ ಸೇರಿ ಪ್ರಮುಖರಿದ್ದರು.







