‘ಯಶಸ್ವಿ ಭಾರತ’ ನಿರ್ಮಾಣವಾಗಿಲ್ಲ: ಡಿ.ವಿ.ಸದಾನಂದಗೌಡ

ಬೆಂಗಳೂರು, ಆ.29: ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷವಾಗಿದ್ದರೂ ಈವರೆಗೆ ‘ಯಶಸ್ವಿ ಭಾರತ’ವನ್ನು ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದು ಕೇಂದ್ರ ಸಾಂಖ್ಯಿಕ ಹಾಗೂ ಯೋಜನೆ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಬೇಸರ ವ್ಯಕ್ತಪಡಿಸಿದರು.
ಮಂಗಳವಾರ ಕೆ.ಆರ್.ಪುರ ಕ್ಷೇತ್ರದ ದೂರವಾಣಿ ನಗರದಲ್ಲಿರುವ ಐಟಿಐ ಕ್ರೀಡಾಂಗಣದಲ್ಲಿ ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯು ಕ್ವಿಟ್ ಇಂಡಿಯಾ ಚಳವಳಿಯ 70ನೆ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ತಿರಂಗಾಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಪ್ರಥಮ ಸ್ವಾತಂತ್ರ ಸಂಗ್ರಾಮ 1857ರಲ್ಲಿ ಆರಂಭಗೊಂಡಿತು. ಆದರೆ, 1942ರಲ್ಲಿ ಆರಂಭವಾದ ‘ಬ್ರಿಟಿಷರೆ ಭಾರತ ಬಿಟ್ಟು ತೊಲಗಿ’ ಎಂದು ಮಹಾತ್ಮಗಾಂಧಿ ನಾಯಕತ್ವದಲ್ಲಿ ಮೊಳಗಿದ ಹೇಳಿಕೆ ಕೇವಲ ಘೋಷಣೆಯಾಗಿರಲಿಲ್ಲ. ದೇಶದ ಪ್ರತಿಯೊಬ್ಬ ಜನಸಾಮಾನ್ಯರ ಮನಸ್ಸಿನ ಭಾವನೆಯಾಗಿತ್ತು ಎಂದು ಅವರು ಹೇಳಿದರು.
ಕ್ವಿಟ್ ಇಂಡಿಯಾ ಚಳವಳಿಗೆ 75 ವರ್ಷ, ದೇಶಕ್ಕೆ ಸ್ವಾತಂತ್ರ ಸಿಕ್ಕಿ 70 ವರ್ಷವಾಗಿದೆ. ಆದರೆ, ಈ ಅವಧಿಯಲ್ಲಿ ಯಶಸ್ವಿ ಭಾರತ ನಿರ್ಮಾಣವಾಗಿಲ್ಲ. ಜಾತಿ, ಧರ್ಮ, ಅಧಿಕಾರದ ನಡುವೆ ವಿಭಜಿಸಲ್ಪಟ್ಟಿರುವ ನಾವು, ಎಲ್ಲಕ್ಕಿಂತ ಮೊದಲು ನಾನು ಭಾರತೀಯ ಎಂಬ ಪ್ರತಿಜ್ಞೆ ಸ್ವೀಕರಿಸಬೇಕಿದೆ ಎಂದು ತಿಳಿಸಿದರು.
2022ರ ವೇಳೆಗೆ ಭಾರತವು 75ನೆ ಸ್ವಾತಂತ್ಯ್ರ ಸಂಭ್ರಮವನ್ನು ಆಚರಿಸಲಿದೆ. ಆ ವೇಳೆಗೆ ಭಾರತವು ವಿಶ್ವದ ಯಶಸ್ವಿ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿರಬೇಕು. ಪ್ರಧಾನಿ ನರೇಂದ್ರಮೋದಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಭ್ರಷ್ಟಾಚಾರ ಮುಕ್ತ ಆಡಳಿತದ ವಾಗ್ದಾನವನ್ನು ಈಡೇರಿಸಿದ್ದಾರೆ ಎಂದರು.
ದೇಶದಲ್ಲಿ ಆರ್ಥಿಕ ಶಿಸ್ತು ಮೂಡಿಸಲು ಕೇಂದ್ರ ಸರಕಾರ ಹಲವಾರು ದೃಢ ನಿರ್ಧಾರಗಳನ್ನು ಕೈಗೊಂಡಿದೆ. ಜನಧನ್ ಯೋಜನೆಯಡಿಯಲ್ಲಿ 30 ಕೋಟಿ ಜನರಿಗೆ ಬ್ಯಾಂಕ್ ಖಾತೆಗಳನ್ನು ತೆರೆಸಲಾಗಿದೆ. ಬೇನಾಮಿ ವ್ಯವಹಾರಗಳಿಗೆ ಕಡಿವಾಣ ಹಾಕಲು ಕಾನೂನನ್ನು ಬಲಪಡಿಸಲಾಗಿದೆ. ಜಿಎಸ್‌ಟಿ, ಉದ್ಯೋಗ ಸೃಷ್ಟಿ, ಕೌಶಲ ತರಬೇತಿ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಸದಾನಂದಗೌಡ ತಿಳಿಸಿದರು.
ಕೇಂದ್ರ ಸರಕಾರದ ಸ್ವಾಮ್ಯದ ಐಟಿಐ ಕಾರ್ಖಾನೆಯು ಅನುಭವಿಸುತ್ತಿರುವ ಸಮಸ್ಯೆಗಳ ಅರಿವು ತನಗಿದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವರು ಸೇರಿದಂತೆ ಇನ್ನಿತರರೊಂದಿಗೆ ಚರ್ಚಿಸಿ, ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸದಾನಂದಗೌಡ ಹೇಳಿದರು.
ತಿರಂಗಾಯಾತ್ರೆ
ಕಾರ್ಮಿಕ ಭವಿಷ್ಯ ನಿಧಿ ಸಂಘಟನೆ ಆಯೋಜಿಸಿದ್ದ ತಿರಂಗಾ ಯಾತ್ರೆಯಲ್ಲಿ ಐಟಿಐ ವಿದ್ಯಾಮಂದಿರ, ಐಟಿಐ ಸೆಂಟ್ರಲ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಇನ್ನಿತರ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







