ಕಸ ವಿಲೇವಾರಿ ವಾಹನಗಳ ಖರೀದಿಯಲ್ಲಿ ಅವ್ಯವಹಾರ ಆರೋಪ: ಸಿದ್ದರಾಮಯ್ಯ, ಜಾರ್ಜ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು, ಆ. 29: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವಾಹನಗಳು ಮತ್ತು ಯಂತ್ರೋಪಕರಣಗಳ ಖರೀದಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಪಾತ್ರವಿದೆ ಎಂದು ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಗಂಭೀರವಾಗಿ ಆರೋಪಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸವಿಲೇವಾರಿ ವಾಹನಗಳು ಮತ್ತು ಯಂತ್ರೋಪಕರಣಗಳ ಖರೀದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಬರೋಬ್ಬರಿ 14.5 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದರು.
ಅಮೆರಿಕಾದ ಎಲ್‌ಜಿನ್ ಮತ್ತು ಇಟಲಿಯ ಬಯೋಸ್ಟ್ರಾದ ಸಂಸ್ಥೆಗಳು ಆಮದು ಸುಂಕ ರಿಯಾಯಿತಿ ಸಹಿತ ಪ್ರತಿ ವಾಹನಗಳಿಗೆ 65 ಲಕ್ಷ ರೂ. ವೆಚ್ಚದಲ್ಲಿ ಮೆಕಾನಿಕಲ್ ಸ್ವೀಪಿಂಗ್ ಮೆಷಿನ್ ವಾಹನಗಳನ್ನು ಪೂರೈಸಲು ಸಿದ್ಧವಿದ್ದವು. ಆದರೆ ಈ ಕಂಪೆನಿಗಳಿಂದ ತಮಗೆ ಕಿಕ್ ಬ್ಯಾಕ್ ಸಿಗುವುದಿಲ್ಲ ಎಂಬ ಒಂದೇ ಕಾರಣಕ್ಕಾಗಿ ಆ ಸಂಸ್ಥೆಗಳ ಪ್ರಸ್ತಾವನೆಯನ್ನು ಕೈಬಿಟ್ಟರು ಎಂದು ದೂರಿದರು.
ಮೆ. ಟಿಪಿಎಸ್ ಸಂಸ್ಥೆಯ ಮಹದೇವ ಭಟ್ ಮೂಲಕ ತಲಾ 1.30 ಕೋಟಿ ರೂ.ಗೆ ಮೆಕಾನಿಕಲ್ ಸ್ವೀಪಿಂಗ್ ಮೆಷಿನ್‌ಗಳನ್ನು ಖರೀದಿಸಲಾಗಿದೆ. ಆದರೆ ಈ ವಾಹನಗಳನ್ನು ಖರೀದಿಸಿದ ಎರಡೇ ತಿಂಗಳಲ್ಲಿ ತುಕ್ಕು ಹಿಡಿದು ಮೂಲೆ ಸೇರಿವೆ. 9 ಮೆಕಾನಿಕಲ್ ಸ್ವೀಪಿಂಗ್ ಮೆನ್ ವಾಹನಗಳ ಖರೀದಿ ಮತ್ತು 25 ಕಾಂಪ್ಯಾಕ್ಟರ್‌ಗಳ ಖರೀದಿಯಲ್ಲಿ ಒಟ್ಟು 14.5 ಕೋಟಿ ರೂ. ಕಮಿಷನ್ ರೂಪದಲ್ಲಿ ಪಡೆದಿದ್ದಾರೆ ಎಂದು ತಿಳಿಸಿದರು.
ಕ್ರಿಮಿನಲ್ ಪ್ರಕರಣ ದಾಖಲು: ಮೆ. ಟಿಪಿಎಸ್ ಸಂಸ್ಥೆಯ ಮಹದೇವ್ ಭಟ್ ಮತ್ತು ಪಾಲಿಕೆಯ ಎಸ್‌ಡಬ್ಲುಎಂ ಇಲಾಖೆಯ ಅಧಿಕಾರಿಗಳ ವಿರುದ್ಧ ಈಗಾಗಲೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಜೆ. ಜಾರ್ಜ್ ವಿರುದ್ಧವೂ ಲೋಕಾಯುಕ್ತ, ಎಸಿಬಿ, ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದರು.
ಸಿಬಿಐ ತನಿಖೆಗೆ ಆಗ್ರಹ: ವಾಹನ ಮತ್ತು ಯಂತ್ರೋಪಕರಣಗಳ ಖರೀದಿ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸಂಬಂಧಪಟ್ಟಂತೆ ಖರ್ಚು ವೆಚ್ಚಗಳ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡಬೇಕು ಎಂದು ಆಡಳಿತರೂಢ ಪಕ್ಷಕ್ಕೆ ಸವಾಲು ಹಾಕಿದ ಅವರು, ಘನತ್ಯಾಜ್ಯ ವಿಲೇವಾರಿಗಾಗಿ ವಾಹನಗಳು ಮತ್ತು ಯಂತ್ರೋಪಕರಣಗಳ ಖರೀದಿಯಲ್ಲಿ ಆಗಿರುವ ಅವ್ಯವಹಾರವನ್ನು ಬಯಲಿಗೆಳೆಯಲು ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.







