ಮ್ಯಾನ್ಮಾರ್: 3 ದಿನಗಳಲ್ಲಿ 3,000 ರೋಹಿಂಗ್ಯನ್ನರ ಮಾರಣಹೋಮ
ಯುರೋಪಿಯನ್ ರೋಹಿಂಗ್ಯಾ ಕೌನ್ಸಿಲ್ ಆರೋಪ

ಮ್ಯಾನ್ಮಾರ್, ಆ.29: ಕಳೆದ 3 ದಿನಗಳಲ್ಲಿ ಮ್ಯಾನ್ಮಾರ್ ನಲ್ಲಿ 3,000 ರೋಹಿಂಗ್ಯಾ ಮುಸ್ಲಿಮರನ್ನು ಹತ್ಯೆಗೈಯಲಾಗಿದೆ ಎಂದು ಯುರೋಪಿಯನ್ ರೋಹಿಂಗ್ಯಾ ಕೌನ್ಸಿಲ್ ಆರೋಪಿಸಿದೆ.
ಕೌನ್ಸಿಲ್ ನ ವರದಿಯನ್ನು ಉಲ್ಲೇಖಿಸಿ ‘ಡೈಲಿ ಸಬಾಹ್’ ಈ ಬಗ್ಗೆ ವರದಿ ಮಾಡಿದ್ದು, ರಾಖೈನ್ ನಲ್ಲಿ 2000ದಿಂದ 3000 ರೋಹಿಂಗ್ಯನ್ನರ ಮಾರಣಹೋಮ ನಡೆದಿದೆ. 1000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಕೌನ್ಸಿಲ್ ನ ವಕ್ತಾರೆ ಅನಿತಾ ಚಗ್ ಹೇಳಿದ್ದಾರೆ.
“ರಾಖೈನ್ ನಲ್ಲಿರುವ ಇಂದಿನ ಪರಿಸ್ಥಿತಿ ನಿಧಾನವಾಗಿ ಸುಡುವ ನರಮೇಧದಂತಿದೆ. ಮ್ಯಾನ್ಮಾರ್ ನ ಮಿಲಿಟರಿ ಪಡೆ ಈ ಕೃತ್ಯದ ಹಿಂದಿದೆ. ರವಿವಾರ ಸೌಗ್ಪರ ಗ್ರಾಮದಲ್ಲೇ 1000 ಮಂದಿ ಮುಸ್ಲಿಮರನ್ನು ಕೊಲೆಗೈಯಲಾಗಿದೆ. ಲಕ್ಷಕ್ಕೂ ಅಧಿಕ ನಾಗರಿಕರು ರಾಖೈನ್ ನಿಂದ ಸ್ಥಳಾಂತರಗೊಂಡಿದ್ದಾರೆ. 2000 ಮಂದಿ ಮ್ಯಾನ್ಮಾರ್-ಬಾಂಗ್ಲಾ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅನಿತಾ ಹೇಳಿದ್ದಾರೆ ಎಂದು ‘ಡೈಲಿ ಸಬಾಹ್’ ವರದಿ ಮಾಡಿದೆ.
ಔಕ್ ನಾನ್ ಯಾರ್ ಗ್ರಾಮದಿಂದ ನೂರಕ್ಕೂ ಅಧಿಕ ಮಂದಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಅವರ ಸುರಕ್ಷತೆಯ ಬಗ್ಗೆ ಭಯವಿದೆ ಎಂದವರು ಹೇಳಿದ್ದಾರೆ ಎನ್ನಲಾಗಿದೆ.
ಮ್ಯಾನ್ಮಾರ್ ನ ರಾಖೈನ್ ನ ಪಶ್ಚಿಮ ಗಡಿಭಾಗದಲ್ಲಿ ನಡೆದ ದಾಳಿಯ ನಂತರ ರೋಹಿಂಗ್ಯನ್ನರ ಕೊಲೆ ಹಾಗೂ ಅವರ ಮೇಲೆ ದಾಳಿಗಳು ಆರಂಭವಾಗಿತ್ತು. ಮ್ಯಾನ್ಮಾರ್ ಸೇನೆ ಸಾವಿರಾರು ರೋಹಿಂಗ್ಯನ್ನರನ್ನು ಮೋರ್ಟರ್ ಹಾಗೂ ಮೆಷಿನ್ ಗನ್ ಗಳ ಮೂಲಕ ಬೆದರಿಸಿದ್ದಲ್ಲದೆ, ಮನೆಗಳನ್ನು ದ್ವಂಸಗೈದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿತ್ತು.







