ಹನೂರು: ಗಣಪತಿ ಹಬ್ಬದ ಕಾರ್ಯಕ್ರಮದಲ್ಲಿ ಅರೆಬೆತ್ತಲೆ ಕುಣಿತ

ಹನೂರು, ಆ.29: ಮಲೈ ಮಹದೇಶ್ವರ ಬೆಟ್ಟದಲ್ಲಿ ಗಣಪತಿ ಹಬ್ಬದ ಪ್ರಯುಕ್ತ ನಿನ್ನೆ ಸಂಜೆ ನಡೆದ ರಸಮಂಜರಿ ಕಾಯ೯ಕ್ರಮದಲ್ಲಿ ಹುಡುಗಿಯರನ್ನು ಕರೆತಂದು ಅರೆಬೆತ್ತಲೆಯಾಗಿ ಕುಣಿಸಿದ ಘಟನೆ ನಡೆದಿದೆ.
ಮಹದೇಶ್ವರ ಬೆಟ್ಟ ನೌಕರರ ಸಂಘ ವತಿಯಿಂದ ಆಯೋಜಿದ್ದ ನಂಗನಾಚ್ ರಸಮಂಜರಿ ಕಾಯ೯ಕ್ರಮದಲ್ಲಿ ಸಾವಿರಾರು ಮಂದಿಯ ಎದುರು ಬೆಂಗಳೂರಿನಿಂದ ಬಂದಿದ್ದ ಹುಡುಗಿಯರು ಅರೆಬೆತ್ತಲೆಯಾಗಿ ಕುಣಿಸಿದ್ದು, ಸಾವಿರಾರು ಮಾದಪ್ಪನ ಭಕ್ತರು ಈ ಕಾಯ೯ಕ್ರಮದ ಆಯೋಜಕರಿಗೆ ಹಿಡಿ ಶಾಪ ಹಾಕುವಂತಾಗಿದೆ.
ಕಳೆದ ನಾಲ್ಕು ವಷ೯ಗಳಿಂದ ಗಣಪತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿರುವ ನೌಕರರ ಸಂಘ ಹಿಂದೆಂದೂ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿರಲಿಲ್ಲ. ಆದರೆ ಈ ಬಾರಿ ನೌಕರರ ಸಂಘ ವಿನೂತನ ಮಾದರಿಯ ಕಾಯ೯ಕ್ರಮ ನಡೆಸಿರುವುದು ಸ್ಥಳೀಯ ವಾಸಿಗಳು ಹಾಗೂ ಭಕ್ತರು ಖಂಡಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮಲೈ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಉಪ ಕಾಯ೯ದಶಿ೯ ಬಸವರಾಜು ನೇತೃತ್ವದಲ್ಲಿ ಮಾದಪ್ಪನ ದೇವಸ್ಥಾನದ ಆವರಣದಲ್ಲೇ ನಡೆದ ಈ ಅರೆಬೆತ್ತಲೆ ಕುಣಿತದಿಂದ ಮಲೈ ಮಹದೇಶ್ವರ ಬೆಟ್ಟದ ಪ್ರಸಿದ್ಧಿಗೆ ಕಳಂಕ ಬಂದಂತಾಗಿದೆ ಎಂದು ಆರೋಪಿಸುವ ಅಲ್ಲಿನ ನಿವಾಸಿಗಳು ಈ ಕಾಯ೯ಕ್ರಮ ಆಯೋಜಿಸಿದವರು ಯಾರೇ ಆಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ.ರಾಮು ಅವರಿಗೆ ಒತ್ತಾಯಿಸಿದ್ದಾರೆ.
ಪವಿತ್ರ ಯಾತ್ರಾಸ್ಥಳವಾದ ಈ ಮಹದೇಶ್ವರ ಬೆಟ್ಟಕ್ಕೆ ನೂರಾರು ವಷ೯ಗಳಿಂದ ಅದರದೇ ಆದ ಇತಿಹಾಸವಿದೆ. ಅದನ್ನೆಲ್ಲ ಮಣ್ಣುಪಾಲು ಮಾಡಲು ಹೊರಟಿರುವ ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂತಹ ಅರೆಬೆತ್ತಲೆ ಕುಣಿತ ನಡೆಯುತ್ತಿದೆ ಎಂಬುದು ಭಕ್ತರ ಆರೋಪ.







