ಬ್ರಹ್ಮಾವರ: ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ

ಬ್ರಹ್ಮಾವರ, ಆ.29: ಪದವಿಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾಕೂಟ ಇಲ್ಲಿನ ಎಸ್‌ಎಂಎಸ್ ಪದವಿಪೂರ್ವ ಕಾಲೇಜಿನ ಆತಿಥೇಯತ್ವ ದಲ್ಲಿ ಎಸ್‌ಎಂಎಸ್ ಕ್ರೀಡಾಂಗಣದಲ್ಲಿ ಮುಂದಿನ ನವೆಂಬರ್ ತಿಂಗಳಲ್ಲಿ ನಡೆಯಲಿದ್ದು, ಇದಕ್ಕಾಗಿ ರಾಜ್ಯ ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಅವರ ಸೂಚನೆಯಂತೆ ಪೂರ್ವಭಾವಿ ಸಮಾಲೋಚನಾ ಸಭೆಯೊಂದು ಮಂಗಳವಾರ ಕಾಲೇಜಿನಲ್ಲಿ ನಡೆಯಿತು.
ನವೆಂಬರ್ 15ರಿಂದ 20ರೊಳಗಿನ ದಿನಾಂಕದಲ್ಲಿ ಕ್ರೀಡಾಕೂಟವನ್ನು ನಡೆಸುವ ಬಗ್ಗೆ ಸಭೆ ಚರ್ಚೆ ನಡೆಸಿತು. ಸಭೆಯಲ್ಲಿ ಮಾತನಾಡಿದ ಜಿಪಂ ಉಪಾಧ್ಯಕ್ಷೆ ಕೆ.ಶೀಲಾ ಶೆಟ್ಟಿ, ಆತಿಥ್ಯಕ್ಕೆ ಹೆಸರಾದ ಜಿಲ್ಲೆಯ ಸಂಪ್ರದಾಯಕ್ಕೆ ತಕ್ಕಂತೆ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜನೆಯಾಗಬೇಕು. ಕ್ರೀಡೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ರಾಜ್ಯದ ಎಲ್ಲೆಡೆಗಳಿಂದ ಬರುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಉಡುಪಿಯ ಕ್ರೀಡಾಕೂಟ ಅವಿಸ್ಮರಣೀಯ ನೆನಪಾಗಿರಲಿ ಎಂದರು.
ಸಭೆಯಲ್ಲಿದ್ದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಆಯೋಜಕರು ನೀಡಿದ ವರದಿಯಲ್ಲಿ ಸಮಗ್ರವಾಗಿದ್ದು, ಅಚ್ಚುಕಟ್ಟಾಗಿ ನಡೆಯುವ ಭರವಸೆ ಮೂಡಿಸಿದೆ. ಜಿಪಂ ವತಿಯಿಂದ ಕ್ರೀಡಾಕೂಟಕ್ಕೆ ಸರ್ಸಹಕಾರದ ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸಂಜೀವ್ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳ ಸುರಕ್ಷೆಗೆ ಪೂರಕವಾಗುವ ಎಲ್ಲ ದ್ರತಾ ವ್ಯವಸ್ಥೆಗಳನ್ನು ಏರ್ಪಡಿಸುವ ಹೊಣೆ ಪೊಲೀಸ್ ಇಲಾಖೆಯದಾಗಿದ್ದು, ಆಯೋಜಕರು ವಿದ್ಯಾರ್ಥಿಗಳು ತಂಗುವ ಹಾಗೂ ಭಾಗವಹಿಸುವ ಕುರಿತಂತೆ ಸಮ್ರ ಮಾಹಿತಿ ನೀಡುವಂತೆ ಸೂಚಿಸಿದರು.
ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನವೀನ್ ನಾಯಕ್, ಶಿಕ್ಷಣ ಸಂಸ್ಥೆಯ ವಂ. ಸಿ. ಎ.ಐಸಾಕ್, ಡಿಡಿಪಿಯು ವಿಜಯಲಕ್ಷ್ಮಿ, ಕಾಲೇಜು ಪ್ರಾಂಶುಪಾಲರಾದ ಐವಾನ್ ಡಿಸೋಜ, ಉಪತಹಶೀಲ್ದಾರ್ ರಾಘವೇಂದ್ರ ನಾಯಕ್, ಡಿಡಿಪಿಐ ಶೇಖರ್, ಡಾ.ರೋಶನ್‌ಕುಮಾರ್ ಶೆಟ್ಟಿ ವೇದಿಕೆಯಲ್ಲಿದ್ದರು.
ಅಲೆನ್ ರೋಹನ್ ರೊಡ್ರಿಗಸ್ ಸ್ವಾಗತಿಸಿದರು. ಶ್ರೀಧರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸತ್ಯಾರಾಯಣ ಕಾರ್ಯಕ್ರಮ ನಿರೂಪಿಸಿದರು.







