ಕಳತ್ತೂರು: ಕೊರಗರ ಭೂಮಿ ಹಬ್ಬ

ಉಡುಪಿ, ಆ.29: ಕರ್ನಾಟಕ- ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ 10ನೆ ವರ್ಷದ ಕೊರಗರ ಭೂಮಿ ಹಬ್ಬವು ಇತ್ತೀಚೆಗೆ ಕಳತ್ತೂರು ಗ್ರಾಮದ ಕಲ್ಲುಗುಡ್ಡೆ ಕೊರಗರ ಬಲೆಪುವಿನಲ್ಲಿ ಜರಗಿತು.
ದೋಗು ಒಕ್ಕೂಟದ ಧ್ವಜಾರೋಹಣವನ್ನು ನೆರವೇರಿಸಿದರು. ಕಳತ್ತೂರು ಗ್ರಾಪಂ ಅಧ್ಯಕ್ಷೆ ವಿಮಲ ರಮೇಶ್ ತೆಂಗಿನ ಸಸಿ ನೆಟ್ಟು ಶುಭ ಹಾರೈಸಿದರು. ಹಬ್ಬದ ಜ್ಯೋತಿಯನ್ನು ಬಜ್ಜಿ ಕೊರಗ ಬೆಳಗಿಸಿದರು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೈಸೂರು ಬುಡಕಟ್ಟು ಅಧ್ಯಯನ ಇಲಾಖೆಯ ಮುಖ್ಯಸ್ಥ ಡಾ.ಸಿ.ಮಾದೇಗೌಡ ಸೋಲಿಗ ಮಾತನಾಡಿ, ಕೊರಗರ ಭೂಮಿ ಹಬ್ಬದಲ್ಲಿ ಆಳವಾದ ವಿಶೇಷತೆ ಇದೆ ಎಂದು ತಿಳಿಸಿದರು.
ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಸುಶೀಲಾ ಕೆಂಜೂರು ಮಾತನಾಡಿ, ಕೊರಗರ ಭೂಮಿ ಹಬ್ಬವು ಮುಂದಿನ ದಿನಗಳಲ್ಲಿ ಭೂಮಿ ಚಳುವಳಿಯಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಗಿರಿಜನ ಯೋಜನಾಧಿಕಾರಿ ಹರೀಶ್ ಗಾಂವ್ಕರ್ ಮಾತನಾಡಿದರು. ನೀಲು ಕೊರಗ ಕಳತ್ತೂರು, ಸುಶೀಲ ಕೊರಗ ನಾಡ, ಅಶೋಕ್ ಶೆಟ್ಟಿ ಬ್ರಹ್ಮಾವರ, ಬಾಲ್‌ರಾಜ್ ಕೋಡಿಕಲ್ ವಿಚಾರ ಮಂಡನೆ ಮಾಡಿದರು. ಕೊರಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಬೊಗ್ರ ಕೊಕ್ಕರ್ಣೆ, ಕೊಕ್ಕರ್ಣೆ ಸಂಘದ ಅಧ್ಯಕ್ಷ ಚಂದ್ರ ಕೊರಗ, ದಿನೇಶ್ ಕೆಂಜೂರು, ರೂಪಾ ಸೂರಾಲು, ಅಕ್ಕಣಿ ಕಳತ್ತೂರು, ಸುಮತಿ ಕಾಸರಗೆಡು ಉಪಸ್ಥಿತರಿದ್ದರು.
ಸುಂದರ ಕಡಂದಲೆ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಉಪಾಧ್ಯಕ್ಷ ಕೊಗ್ಗ ಮಂಗಳೂರು ವಂದಿಸಿದರು. ರತ್ನಾವತಿ ಕೊರಗ ಹಾಗೂ ರಾಜೇಶ್ ಕೊರಗ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕೊರಗರ ಡೋಲು ಕುಣಿತ ನಡೆಯಿತು.







