ದೋಣಿ ದುರಂತ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ
ಪಡುಬಿದ್ರೆ, ಆ. 29: ಹೆಜಮಾಡಿಯ ಮುಲ್ಕಿ ಅಳಿವೆಯಲ್ಲಿ ಮೀನುಗಾರಿಕಾ ಯಾಂತ್ರಿಕ ನಾಡದೋಣಿ ಅವಘಡ ಸಂಭವಿಸಿ ಕಣ್ಮರೆಯಾಗಿದ್ದ ತರುಣ್ ಪುತ್ರನ್ (26) ಎಂಬವರ ಮೃತದೇಹ ಮಂಗಳವಾರ ಹೆಜಮಾಡಿಯ ಯಾರ್ಡ್ ಸಮೀಪ ಪತ್ತೆಯಾಗಿದೆ.
ರವಿವಾರ ಪಟ್ಟೆಬಲೆ ಮೀನುಗಾರಿಕೆಗೆ ತೆರಳಿದ್ದ ವಿಠೋಭ ರುಕುಮಾಯಿ ದೋಣಿಯು ಸಮುದ್ರ ಪ್ರಕ್ಷುಬ್ದಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿ ವಾಪಾಸ್ ಬರುತ್ತಿದ್ದರು. ಈ ಸಂದರ್ಭ ಮುಲ್ಕಿ ಅಳಿವೆಯಲ್ಲಿ ಶಾಂಭವಿ ಹೊಳೆ ಪ್ರವೇಶದ ವೇಳೆ ದೋಣಿಗೆ ಬಲವಾದ ಅಲೆಯೊಂದು ಅಪ್ಪಳಿಸಿ ಮೂವರು ಮೀನುಗಾರರಾದ ತರುಣ್, ಪ್ರಿಯಾಂಕ್ ಮತ್ತು ಭರತ್ ಸಮುದ್ರಕ್ಕೆ ಎಸೆಯಲ್ಪಟ್ಟಿದ್ದರು. ತಕ್ಷಣ ಭರತ್ ಮತ್ತು ಪ್ರಿಯಾಂಕ್‌ರನ್ನು ಅದೇ ದೋಣಿಯವರು ರಕ್ಷಿಸಿದ್ದರು. ತರುಣ್‌ರನ್ನು ರಕ್ಷಿಸುವ ವೇಳೆ ಅಲೆಯೊಂದು ತರುಣ್‌ಗೆ ಅಪ್ಪಳಿಸಿ ಸಮುದ್ರದೊಳಕ್ಕೆ ಸೆಳೆಯಲ್ಪಟ್ಟಿದ್ದರು.
ಘಟನೆ ನಡೆದ ದಿನದಿಂದ ಹಗಲು ರಾತ್ರಿ ತರುಣ್‌ಗಾಗಿ ಹುಡುಕಾಟ ನಡೆಸಲಾಗಿತ್ತು. ಹೆಜಮಾಡಿ ಹಾಗೂ ಆಸುಪಾಸಿನ ಮೀನುಗಾರರು ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದರು. ಮಂಗಳವಾರ ಮುಂಜಾನೆ ಹುಡುಕಾಡುತ್ತಿದ್ದ ಮೀನುಗಾರ ಯುವಕರಿಗೆ ಯಾರ್ಡ್ ಬಳಿ ತರುಣ್ ಮೃತದೇಹ ಕಂಡುಬಂದಿತ್ತು.
ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





