ಕಾರಜೋಳಗೆ ಯು.ಟಿ ಖಾದರ್ ತಿರುಗೇಟು

ಬೆಂಗಳೂರು, ಆ.29: ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ದಲಿತ ಸಮುದಾಯದ ಯುವತಿಯನ್ನು ಮದುವೆಯಾಗಲಿ ಎಂದಿರುವ ಮಾಜಿ ಸಚಿವ ಗೋವಿಂದ ಕಾರಜೋಳಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ವಿಚಾರದಲ್ಲೂ ರಾಹುಲ್ ಗಾಂಧಿಯನ್ನು ಎಳೆದು ತರುವುದು ಬಿಜೆಪಿ ಮುಖಂಡರಿಗೆ ಅಭ್ಯಾಸವಾಗಿ ಬಿಟ್ಟಿದೆ. ಗೋವಿಂದ ಕಾರಜೋಳ ಬಳಸುವಂತಹ ಪದಗಳನ್ನು ನಾವು ಬಳಸಲು ಸಾಧ್ಯವಿಲ್ಲ ಎಂದರು.
ಪ್ರತಿಯೊಬ್ಬರೂ ತಮ್ಮ ಗೌರವ, ಘನತೆಗೆ ತಕ್ಕಂತೆ ಮಾತನಾಡಬೇಕು. ಕೆಲವರು ಸುಳ್ಳು ಹೇಳಿಕೊಂಡು ಮೇಲಕ್ಕೆ ಬರುತ್ತಾರೆ. ಅದೇ ರೀತಿ ಕೆಳಕ್ಕೂ ಬೀಳುತ್ತಾರೆ. ರಾಹುಲ್‌ಗಾಂಧಿ ಇಂದಲ್ಲ, ನಾಳೆ ಈ ದೇಶದ ಪ್ರಧಾನಿ ಆಗುತ್ತಾರೆ ಎಂದು ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.
ಈಗ ದಲಿತ ಯುವತಿಯನ್ನು ಮದುವೆಯಾಗುವ ವಿಚಾರವನ್ನು ಪ್ರಸ್ತಾಪ ಮಾಡುವುದು ಸರಿಯಲ್ಲ. ಯಾರ ಬಗ್ಗೆ ಏನು ಮಾತನಾಡುತ್ತಿದ್ದೇವೆ ಎಂಬುದನ್ನು ಚಿಂತಿಸಿ ಮಾತನಾಡುವುದು ಉತ್ತಮ ಎಂದು ಕಾರಜೋಳಗೆ ಖಾದರ್ ತಿರುಗೇಟು ನೀಡಿದರು.





