ಯೆನೆಪೋಯ : 194 ಎಂಜಿನಿಯರಿಂಗ್ ಪದವೀಧರರಿಗೆ ಪದವಿ ಪ್ರದಾನ

ಮೂಡುಬಿದಿರೆ, ಆ. 29: ಪಂಚಭೂತಗಳನ್ನು ಆರಾಧನಾ ಭಾವದಿಂದ ನೋಡುವ ಭಾರತೀಯರು ಪ್ರಾಮಾಣಿಕವಾಗಿ ಪರಿಸರ ಪ್ರೀತಿಯನ್ನು ರೂಢಿಸಿಕೊಳ್ಳಬೇಕಾಗಿದೆ. ಸುತ್ತಲ ಪರಿಸರದ ಕಾಳಜಿಯು ವ್ಯಕ್ತಿಯೋರ್ವನ ಬದುಕಿನ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ವಿದ್ಯಾರ್ಥಿಗಳು ಸಾಧನೆಯ ಜೊತೆಗೆ ತಮ್ಮ ಸುತ್ತಮುತ್ತ ನಡೆಯುವ ಬದಲಾವಣೆಗಳ ಮೇಲೆ ಸಾಮಾನ್ಯಜ್ಞಾನವನ್ನು ಹೆಚ್ಚಿಸುತ್ತಾ ಸಾಗಬೇಕು. ಸ್ವಸಾಮರ್ಥ್ಯ, ಅನ್ಯರೊಂದಿಗೆ ಹೊಂದಿರುವ ವ್ಯವಹಾರ ಕೌಶಲ ಹಾಗೂ ಸಂಬಂಧಗಳ ಕುರಿತಾದ ಕಾಳಜಿ ಇದ್ದಾಗ ಮಾತ್ರ ವ್ಯಕ್ತಿಯ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಎನ್‌ಐಟಿಕೆ ಸುರತ್ಕಲ್‌ನ ನಿರ್ದೇಶಕ ಪ್ರೊ.ಕೆ. ಉಮಾ ಮಹೇಶ್ವರ ರಾವ್ ಹೇಳಿದರು.
ಅವರು ತೋಡಾರಿನಲ್ಲಿರುವ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 5 ವಿಭಾಗದ 194 ಪದವೀಧರರಿಗೆ ಕಾಲೇಜಿನ ಸಭಾಂಗಣದಲ್ಲಿ ಪದವಿ ಪ್ರದಾನ ಮಾಡಿ ನಂತರ ಮಾತನಾಡಿದರು.
ಪದವಿ ಪ್ರದಾನ: ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಇನ್‌ಫಾರ್ಮೇಶನ್ ಸೈನ್ಸ್, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್, ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ಈ ಐದು ವಿಭಾಗಗಳ 194 ಮಂದಿ ‘ಪದವಿ ಪ್ರಮಾಣ ಪತ್ರ’ ಸ್ವೀಕರಿಸಿದರು.
ಅಭಿಷೇಕ್ ಅವರನ್ನು ಉತ್ತಮ ನಿರ್ಗಮನ ವಿದ್ಯಾರ್ಥಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಯೆನೆಪೋಯ ಗ್ರೂಫ್‌ನ ಆಡಳಿತ ನಿರ್ದೇಶಕ ಯೆನೆಪೋಯ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆಯನ್ನು ವಹಿಸಿ, ‘ಸ್ಪಷ್ಟ ಗುರಿ ಇರಲಿ; ಗುರಿ ತಲುಪುವ ಶ್ರದ್ಧೆ, ಪರಿಶ್ರಮ ಇರಲಿ’ ಎಂದು ನೂತನ ಎಂಜಿನಿಯರಿಂಗ್ ಪದವೀಧರರಿಗೆ ಕಿವಿಮಾತು ಹೇಳಿದರು.
ಆಡಳಿತ ಮಂಡಳಿಯ ಸದಸ್ಯರಾದ ರಾಮಚಂದ್ರ ಶೆಟ್ಟಿ, ಅಕ್ತಾರ್ ಹುಸೇನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಸತೀಶ್ ಎನ್.(ಮೆಕ್ಯಾನಿಕಲ್), ಪ್ರೊ. ಗಂಗಾಧರ್ (ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್), ಪ್ರೊ. ಗುರುಪ್ರಸಾದ್ (ಕಂಪ್ಯೂಟರ್ ಸೈನ್ಸ್ ), ಪ್ರೊ. ಪಾಂಡು (ಇನ್‌ಫಾರ್ಮೇಶನ್ ಸೈನ್ಸ್), ಪ್ರೊ. ಪ್ರಸನ್ನ (ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ) ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಆರ್.ಜೆ. ಡಿ’ಸೋಜಾ ಸ್ವಾಗತಿಸಿದರು. ಪ್ರೊ. ಕೆವಿನ್ ಜೋಯ್ ಡಿ’ಸೋಜಾ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಜೀವನ್ ಪಿಂಟೋ ವಂದಿಸಿದರು.







