ಗುರ್ಮೀತ್ ಸಿಂಗ್ ನ ಈ ' ಪ್ರೇಮಿ' ಶಿಷ್ಯ ಎಚ್ಚರವಾಗಿ ನೋಡುವಾಗ ಈತನ ವೃಷಣಗಳೇ ಮಾಯವಾಗಿದ್ದವು!
ಸಂತಾನೋತ್ಪತ್ತಿ ಸಾಮರ್ಥ್ಯ ಹರಣ ಮಾಡುವ ಬಾಬಾ ಮಾಫಿಯಾದ ಬಲಿಪಶು

ಹೊಸದಿಲ್ಲಿ, ಆ.29: ಮೆಡಿಕಲ್ ಕಂಪೌಂಡರ್ ಒಬ್ಬ ನೀಡಿದ ಪಾನೀಯ ಕುಡಿದು ಪ್ರಜ್ಞೆ ತಪ್ಪಿ ಬಿದ್ದ ಹಂಸರಾಜ್ ಚೌಹಾಣ್ ರನ್ನು ಡೇರಾ ಸಚ್ಚಾ ಸೌಧ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಗೆ ಸಾಗಿಸಲಾಗಿತ್ತು. 2 ದಿನಗಳ ನಂತರ ಎಚ್ಚರಗೊಂಡ ಚೌಹಾಣ್ ಒಂದು ಕ್ಷಣ ಹೌಹಾರಿದ್ದರು. ಕಾರಣ ಅವರ ವೃಷಣಗಳೇ ಮಾಯವಾಗಿದ್ದವು!.
ಇದು ನಡೆದದ್ದು 2000ದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ. ಆಗ ಚೌಹಾಣ್ ರಿಗೆ 19 ವರ್ಷ ವಯಸ್ಸಾಗಿತ್ತು.
“ಬಾಬಾ ಗುರ್ಮೀತ್ ಸಿಂಗ್ ಆಜ್ಞೆಯ ಮೇರೆಗೆ ಶಸ್ತ್ರಚಿಕಿತ್ಸೆಗೊಳಗಾದವರಲ್ಲಿ ನಾನೂ ಒಬ್ಬ. ಬಾಬಾನ ಅಣತಿಯಂತೆ ಕೆಲಸ ಮಾಡುತ್ತಿದ್ದ ವೈದ್ಯರು ನನ್ನ ವೃಷಣಗಳನ್ನೇ ತೆಗೆದುಹಾಕಿದರು. ಆನಂತರ ನಾನು ಹಲವಾರು ಬಾರಿ ಹಾರ್ಮೋನು ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದೆ. ಇದರಿಂದಾಗಿ ನನ್ನ ಮುಖದ ಮೇಲಿನ ಕೂದಲುಗಳು ಉದುರಿ, ಹೆಣ್ಣಿನ ಲಕ್ಷಣಗಳು ಕಾಣಿಸಿಕೊಂಡವು” ಎನ್ನುತ್ತಾರೆ ಒಂದು ಕಾಲದಲ್ಲಿ ಬಾಬಾನ ಭಕ್ತನಾಗಿದ್ದ ಹಂಸರಾಜ್.
ಈ ಬಗ್ಗೆ ‘ದ ಕ್ವಿಂಟ್’ ಸ್ವತಃ ಚೌಹಾಣ್ ಅವರಿಂದಲೇ ಮಾಹಿತಿ ಕಲೆ ಹಾಕಿದ್ದು, ವೈದ್ಯಕೀಯ ದಾಖಲೆಗಳು ಸಹ ಅವರಿಗೆ ವೃಷಣಗಳಿಲ್ಲದಿರುವುದನ್ನು ಸಾಬೀತುಪಡಿಸಿದೆ. ಈ ಬಗ್ಗೆ ಗುರ್ಮೀತ್ ನ ದುಷ್ಕೃತ್ಯಗಳನ್ನು ಹೊರಹಾಕಲು ಚೌಹಾಣ್ ಪಂಜಾಬ್-ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ಆದೇಶದಂತೆ ಮೂವರು ವೈದ್ಯರು ಸಿದ್ಧಪಡಿಸಿದ ವರದಿ ಈ ಆಘಾತಕಾರಿ ವಿಷಯ ಸತ್ಯ ಎನ್ನುವುದನ್ನು ನಿರೂಪಿಸಿದೆ. 2014ರ ಡಿಸೆಂಬರ್ 23ರಂದು ನ್ಯಾಯಾಲಯವು ಚೌಹಾಣ್ ಸಂತಾನೋತ್ಪತ್ತಿ ಸಾಮರ್ಥ್ಯ ಕಳೆದುಕೊಂಡಿದ್ದಾರೆ ಎಂದಿತ್ತು.
1996ರ ಜನವರಿ 15ರಂದು ಹಂಸರಾಜ್ ಡೇರಾ ಸಚ್ಚಾ ಸೌಧಾ ಸೇರಿದ್ದರು. ಆಗ ಅವರಿಗೆ 13 ವರ್ಷ ವಯಸ್ಸಾಗಿತ್ತು. “ನನಗೆ ಬರ್ಫಿಯ ತುಂಡೊಂದನ್ನು ನೀಡಲಾಗಿತ್ತು. ಬಾಬಾ ಆಶ್ರಮದಲ್ಲಿ ನಡೆಯುತ್ತಿದ್ದ ಸಾಮಾನ್ಯ ದೀಕ್ಷಾ ವಿಧಿ ಅದಾಗಿತ್ತು. ಧ್ವನಿವರ್ಧಕಗಳನ್ನು ಕಟ್ಟುವಂತಹ ಕೆಲಸಗಳನ್ನು ನನಗೆ ನೀಡಲಾಗಿತ್ತು. ತದನಂತರ ಗಿಟಾರ್ ನುಡಿಸುವುದು ಹಾಗು ಭಜನೆಗಳನ್ನು ಹಾಡುತ್ತಿದ್ದೆ. ಸಿರ್ಸಾ ಆಶ್ರಮದಲ್ಲಿರುವ ಬ್ರಹ್ಮಚಾರಿಗಳು ಮದುವೆಯಾಗುವುದನ್ನು ಹಾಗೂ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಯಬೇಕು ಎಂದು 2000ದಲ್ಲಿ ಬಾಬಾ ನಿರ್ಧರಿಸಿದ. ಡಾ.ಎಂ.ಪಿ. ಸಿಂಗ್, ಡಾ.ಪಂಕಜ್ ಗರ್ಗ್ ಗೆ ಭಕ್ತರ ಸಂತಾನಹರಣ ನಡೆಸುವ ಕೆಲಸ ವಹಿಸಲಾಯಿತು” ಎನ್ನುತ್ತಾರೆ ಹಂಸರಾಜ್ ಚೌಹಾಣ್,
ಆಶ್ರಮದಲ್ಲಿರುವವವರು ಮೊಬೈಲ್ ಫೋನ್ ಗಳನ್ನು ಬಳಕೆ ಮಾಡದಂತೆ, ದಿನಪತ್ರಿಕೆಗಳನ್ನು ಓದದಂತೆ, ಕೆಲ ಕ್ಷಣಗಳ ಕಾಲ ಸಂಬಂಧಿಕರೊಡನೆ ಮಾತನಾಡದಂತೆ ನಿರ್ಬಂಧ ವಿಧಿಸಲಾಗಿತ್ತು ಎನ್ನುತ್ತಾರೆ ಅವರು.
ಗುರ್ಮೀತ್ ಮಗಳು ಎಂದು ಗುರುತಿಸಲ್ಪಟ್ಟಿರುವ ಹನಿಪ್ರೀತ್ ಇಂಸಾನ್ ಹಾಗೂ ಬಾಬನ ನಡುವಿನ ಸಂಬಂಧ ‘ಪ್ರಶ್ನಾರ್ಹ’ ಎಂದು ಹೆಸರು ಹೇಳಿಲಿಚ್ಛಿಸದ ಡೇರಾ ಸಚ್ಚಾ ಸೌಧಾದ ಭಕ್ತರೊಬ್ಬರು ತಿಳಿಸಿದ್ದಾರೆ ಎಂದು ‘ದ ಕ್ವಿಂಟ್’ ವರದಿ ಮಾಡಿದೆ.







