ಮಣ್ಣಿನ ದಿಬ್ಬ ಕುಸಿದು ಕೂಲಿ ಕಾರ್ಮಿಕ ಮೃತ್ಯು

ಬೆಂಗಳೂರು, ಆ.29: ಒಳಚರಂಡಿ ಪೈಪ್ ಅಳವಡಿಕೆ ಕಾಮಗಾರಿಯಲ್ಲಿ ತೊಡಗಿದ್ದ ವೇಳೆ ಮಣ್ಣಿನ ದಿಬ್ಬ ಕುಸಿದು ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಮೃತ ನಗರದ ಬಿ ಹಂತದ ವೀರೇಶ್(25) ಎಂಬ ಕಾರ್ಮಿಕ ಮೃತಪಟ್ಟಿದ್ದು, ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕ ಮಹೇಶ್(25) ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಯಚೂರಿನವರಾದ ಕಾರ್ಮಿಕರು ಕೆಲಸ ಅರಸಿ ಕೆಲ ತಿಂಗಳ ಹಿಂದೆ ಕುಟುಂಬಸ್ಥರೊಂದಿಗೆ ನಗರಕ್ಕೆ ಬಂದಿದ್ದರು. ಅಮೃತ ಹಳ್ಳಿಯಲ್ಲಿ ಸಣ್ಣ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದರು. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಚರಂಡಿ ಪೈಪ್‌ಗಳನ್ನು ಅಳವಡಿಸುವ ಕಾಮಗಾರಿಯ ಗುತ್ತಿಗೆಯನ್ನು ಭಾಸ್ಕರ್ ಎಂಬುವರು ಪಡೆದಿದ್ದರು ಎನ್ನಲಾಗಿದೆ.
ಮಂಗಳವಾರ ಸಂಜೆ ಅಮೃತಹಳ್ಳಿಯ ಅಮೃತ ನಗರದಲ್ಲಿ ಹಿಟಾಚಿ ಯಂತ್ರದ ನಿರ್ವಾಹಕ, ಬಿ ಹಂತದ ಮುಖ್ಯ ರಸ್ತೆಯ ಮಧ್ಯಭಾಗದಲ್ಲಿ ಗುಂಡಿ ತೋಡುತ್ತಿದ್ದರು. ಸಮೀಪದ ಗುಂಡಿಯೊಳಗೆ ಇಳಿದಿದ್ದ ಕಾರ್ಮಿಕರು ಪೈಪ್‌ಗಳನ್ನು ಅಳವಡಿಸುವುದರಲ್ಲಿ ನಿರತರಾಗಿದ್ದರು. ಆಗ ಇದ್ದಕ್ಕಿದ್ದಂತೆ ಅವರ ಮೇಲೆ ಮಣ್ಣು ಕುಸಿದಿದೆ. ಬಳಿಕ ಸ್ಥಳೀಯರು ಮಣ್ಣು ಸರಿಸಿ ಕಾರ್ಮಿಕರನ್ನು ಹೊರತೆಗೆದಿದ್ದಾರೆ. ಅಷ್ಟರಲ್ಲಿ ವೀರೇಶ್ ಉಸಿರುಗಟ್ಟಿ ಸಾವನ್ನಪ್ಪಿದ್ದರು ಎಂದು ಮೂಲಗಳು ತಿಳಿಸಿವೆ.
ಕಾಮಗಾರಿ ವೇಳೆ ಕಾರ್ಮಿಕರ ಹಿತರಕ್ಷಣೆಗಾಗಿ ಯಾವುದೇ ರೀತಿಯ ಸುರಕ್ಷತಾ ಕ್ರಮ ತೆಗೆದುಕೊಂಡಿರಲಿಲ್ಲ. ಹೀಗಾಗಿ ಘಟನೆ ಸಂಭವಿಸಿದೆ. ಈ ಸಂಬಂಧ ಗುತ್ತಿಗೆದಾರ ಭಾಸ್ಕರ್ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







