ಸರಕಾರಿ ಅಧಿಕಾರಿಗಳನ್ನು ಕೋರ್ಟ್‌ಗೆ ಹಾಜರಾಗುವಂತೆ ಮಾಡಿದ ವ್ಯಕ್ತಿಗೆ 50 ಸಾವಿರ ರೂ.ದಂಡ
.jpg)
ಬೆಂಗಳೂರು, ಆ.29: ನಿಯಮ ಬಾಹಿರವಾಗಿ ಬಹುಮಹಡಿ ಕಟ್ಟಡ ನಿರ್ಮಿಸಿದ್ದಲ್ಲದೆ, ಸತ್ಯ ಮರೆ ಮಾಚುವ ಮೂಲಕ ಇಬ್ಬರು ಸರಕಾರಿ ಅಧಿಕಾರಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಮಾಡಿದ ವ್ಯಕ್ತಿಯೊಬ್ಬನಿಗೆ ಹೈಕೋರ್ಟ್ 50 ಸಾವಿರ ರೂ. ದಂಡ ವಿಧಿಸಿದೆ.
ವಿರಾಜಪೇಟೆ ಶಾಂತಿನಗರದ ನಿವಾಸಿ ಡಿ.ಎಚ್.ಮೊಯಿದು ದಂಡಕ್ಕೆ ಗುರಿಯಾದ ವ್ಯಕ್ತಿ. ಮಾಡಿದ ತಪ್ಪಿಗೆ ಪ್ರತಿಯಾಗಿ ಮಡಿಕೇರಿ ನಗರಸಭೆ ಆಯುಕ್ತೆ ಬಿ.ಶುಭಾ ಮತ್ತು ಮಡಿಕೇರಿ ನಗರಾಭಿವೃದ್ಧಿ ಇಲಾಖೆ ಆಯುಕ್ತೆ ಎಂ.ಎನ್.ಸೌಮ್ಯ ಅವರಿಗೆ ತಲಾ 25 ಸಾವಿರ ರೂ. ಪಾವತಿಸುವಂತೆ ಮೊಯಿದುಗೆ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರು ನಿರ್ದೇಶಿಸಿದ್ದಾರೆ.
ಪ್ರಕರಣವೇನು: ವಿರಾಜಪೇಟೆ ತಾಲೂಕಿನ ಮೊಯಿದು ನಿರ್ಮಿಸಿದ್ದ ಬಹುಮಹಡಿ ಕಟ್ಟಡಕ್ಕೆ ಹಿಂದೆ ಮಂಜೂರು ಮಾಡಿದ್ದ ನಕ್ಷೆಯನ್ನು ನಗರಸಭೆ ಆಯುಕ್ತರು 2017ರ ಮಾರ್ಚ್ 27ರಂದು ರದ್ದುಪಡಿಸಿದ್ದರು. ಈ ಕ್ರಮ ಪ್ರಶ್ನಿಸಿ ಮೊಯಿದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ನಕ್ಷೆ ರದ್ದುಪಡಿಸಿದ್ದ ನಗರಸಭೆ ಆಯುಕ್ತರ ಆದೇಶ ರದ್ದುಪಡಿಸಬೇಕು ಹಾಗೂ ತಮಗೆ ಹೊಸದಾಗಿ ನಕ್ಷೆ ಮಂಜೂರು ಮಾಡಿ, ಕಟ್ಟಡಕ್ಕೆ ಶಾಶ್ವತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ನಿರ್ದೇಶಿಸುವಂತೆ ಕೋರಿದ್ದರು.
ಮೊದಲಿಗೆ ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ನಗರ ಸಭೆ ಆಯುಕ್ತರು, ಮಡಿಕೇರಿ ನಗರಾಭಿವೃದ್ಧಿ ಇಲಾಖೆ ಆಯುಕ್ತರು ಮತ್ತು ಚೆಸ್ಕಾಂ ಕಾರ್ಯಕಾರಿ ಇಂಜಿನಿಯರ್‌ಗೆ ನೋಟಿಸ್ ನೀಡಿ, ವಿಚಾರಣೆಗೆ ತಪ್ಪದೇ ಹಾಜರಾಗಲು ಸೂಚಿಸಿತ್ತು. ಒಂದೊಮ್ಮೆ ಹಾಜರಾಗಿದ್ದರೆ ನಗರಸಭೆ ಆಯುಕ್ತರು ಕೋರ್ಟ್‌ಗೆ 25 ಸಾವಿರ ರೂ. ಠೇವಣಿ ಇರಬೇಕು ಎಂದು ತಾಕೀತು ಮಾಡಿತ್ತು.
ಇದರಿಂದ ನಗರ ಪಾಲಿಕೆ ಆಯುಕ್ತೆ ಬಿ.ಶುಭಾ ಮತ್ತು ಮಡಿಕೇರಿ ನಗರಾಭಿವೃದ್ಧಿ ಇಲಾಖೆ ಆಯುಕ್ತೆ ಎಂ.ಎನ್.ಸೌಮ್ಯ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಮೊಯಿದು ಇದೇ ತಕರಾರು ಅರ್ಜಿಯಲ್ಲಿ ಮಾಡಿರುವ ಮನವಿ ಸಂಬಂಧ ಮೊದಲು ಮಡಿಕೇರಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಅಲ್ಲಿ ಯಾವುದೇ ರಿಲೀಫ್ ಸಿಗದಿದ್ದಕ್ಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಆತನ ಅರ್ಜಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಹಂತದಲ್ಲಿದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಇದರಿಂದ ಆಕ್ರೋಶಗೊಂಡ ನ್ಯಾಯಪೀಠ, ಅರ್ಜಿದಾರ ಮತ್ತು ಆತನ ಪರ ವಕೀಲರು ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಮಾಹಿತಿಯನ್ನು ನಮಗೆ ತಿಳಿಸಿಲ್ಲ. ಅಶುದ್ಧ ಕೈಗಳಿಂದ ಹೈಕೋರ್ಟ್‌ಗೆ ಬಂದ ಅರ್ಜಿದಾರ ಯಾವುದೇ ರಿಲೀಫ್ ಪಡೆಯಲು ಅರ್ಹನಾಗಿಲ್ಲ. ನ್ಯಾಯಾಲಯದ ಸಮಾನತೆ ಮತ್ತು ಅದರ ಪರಮಾಧಿಕಾರ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ತಡೆಯಲು ಅರ್ಜಿದಾರರನ್ನು ನ್ಯಾಯದ ಉಕ್ಕಿನ ಕೈಗಳಿಂದ ಬಲವಾಗಿ ವ್ಯವಹರಿಸಬೇಕಿದೆ. ಅರ್ಜಿದಾರರ ನಡವಳಿಕೆಯಿಂದ ಸಾರ್ವಜನಿಕರ ಕೆಲಸ ನಿರ್ವಹಿಸಬೇಕಿದ್ದ ಇಬ್ಬರು ಸರಕಾರಿ ಅಧಿಕಾರಿಗಳು ಸುಮ್ಮನೆ ಕೋರ್ಟ್‌ಗೆ ಕರೆಸುವಂತಾಯಿತು. ಕೋರ್ಟ್‌ನ್ನು ತಪ್ಪುದಾರಿಗೆ ಎಳೆದ ಪರಿಣಾಮವನ್ನು ಅರ್ಜಿದಾರ ಹೊರಬೇಕು ಎಂದು ಅಭಿಪ್ರಾಯಪಟ್ಟು 50 ಸಾವಿರ ರೂ. ದಂಡ ವಿಧಿಸಿತು.







