ಸೆ.6 ರಿಂದ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಒತ್ತಾಯಿಸ ಧರಣಿ

ತುಮಕೂರು,ಆ.29: ರಾಜ್ಯದ ಶಿಕ್ಷಕರ ಮತ್ತು ಉಪನ್ಯಾಸಕ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾದ 13 ಮಂದಿ ವಿಧಾನಪರಿಷತ್ ಸದಸ್ಯರು ಸೆಪ್ಟಂಬರ್ 6 ರಿಂದು ವಿಧಾನ ಸೌಧದ ಗಾಂಧಿ ಪ್ರತಿಮೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಲವಾರು ಬಾರಿ ಶಿಕ್ಷಕರ ಮತ್ತು ಪದವಿಧರರ ಕ್ಷೇತ್ರದ 13 ಜನ ವಿಧಾನ ಪರಿಷತ್ ಸದಸ್ಯರು ಪರಿಷತ್‍ನ ಒಳಗೆ ಮತ್ತು ಹೊರಗೆ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಿದರೂ ಯಾವುದೇ ಪ್ರಯೋಜನ ಆಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ನಾಲ್ಕುವರೆ ವರ್ಷ ಕಳೆದರೂ ಚುನಾವಣಾ ಪೂರ್ವದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಶಿಕ್ಷಕರ ಸಮಸ್ಯೆಯ ನಿವಾರಣೆ ಪ್ರಣಾಳಿಕೆಯಲ್ಲಿನ ಆಶ್ವಾಸನೆ ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದರು.
ರಾಜ್ಯ ಸರಕಾರ ಪ್ರಮುಖವಾಗಿ ಶಿಕ್ಷಕರ ಮತ್ತು ಉಪನ್ಯಾಸಕರ ವೇತನ ತಾರತಮ್ಯವನ್ನು ನಿವಾರಿಸಲು ವಿಫಲವಾಗಿದೆ. ಆರನೇ ವೇತನ ಆಯೋಗವನ್ನು ರಚನೆ ಮಾಡಿದ್ದರೂ ರಾಜ್ಯದ ಸರಕಾರಿ ಮತ್ತು ಅರೆ ಸರಕಾರಿ ನೌಕರರಿಗೆ ಜೀವನ ನಿರ್ವಹಣೆಯ ವೆಚ್ಚಗಳಿಗೆ ಅನುಗುಣವಾಗಿ ವೇತನ ಹೆಚ್ಚಳ ಮಾಡಿಲ್ಲ. ಕಾಲ್ಪನಿಕ ವೇತನವನ್ನು ಹಾಗು ಕಾಲ್ಪನಿಕ ಬಡ್ತಿಯನ್ನು ಜಾರಿಗೊಳಿಸದೆ ಶಿಕ್ಷಕರ ಮತ್ತು ಉಪನ್ಯಾಸಕರ ಬೇಡಿಕೆಗಳನ್ನು ಮುಂದೂಡುತ್ತಾ ಬಂದಿದೆ ಎಂದರು.
1995ರ ನಂತರ ಇಲ್ಲಿಯವರೆಗೆ ಖಾಸಗಿ ಶಾಲೆಗಳನ್ನು ವೇತನ ಅನುದಾನಕ್ಕೆ ಒಳಪಡಿಸಿಲ್ಲ. ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಪೂರ್ಣ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಂಡಿಲ್ಲ, ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜುಗಳಿಗೆ ಹಾಗೂ ವಿಶೇಷ ಭಡ್ತಿಯನ್ನು ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ನೀಡುವಲ್ಲಿ ಸರಕಾರ ವಿಫಲವಾಗಿದೆ ಎಂದು ತಿಳಿಸಿದರು.
ಖಾಸಗಿ ಮತ್ತು ಸರಕಾರಿ ಶಾಲಾ ಕಾಲೇಜುಗಳಲ್ಲಿ ಬೋಧಕೇತರ ಸಿಬ್ಬಂದಿಯನ್ನು ತುಂಬಲು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಸೆಪ್ಟಂಬರ್ 6 ರಿಂದ 14 ರವರೆಗೆ ಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಸರಕಾರ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದರೆ ಸೆಪ್ಟಂಬರ್ 14 ರಿಂದ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ವಿವರಿಸಿದರು.







