ಚಿಕ್ಕಮಗಳೂರು: ಕಾನೂನು ಅರಿವು ಕಾರ್ಯಕ್ರಮ

ಚಿಕ್ಕಮಗಳೂರು, ಆ.29: ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಕಾನೂನಿನ ಜೊತೆಯಲ್ಲೇ ಬದುಕಬೇಕು. ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ವಕೀಲೆ ಡಿ.ಎಸ್.ಮಮತಾ ತಿಳಿಸಿದರು.
ಅವರು ಮಂಗಳವಾರ ನಗರದ ಟೌನ್ ಮಹಿಳಾ ಸಮಾಜ ಪಿಯು ಕಾಲೇಜು ಮತ್ತು ಲಯನ್ಸ್ ಕ್ಲಬ್ ವತಿಯಿಂದ ರೋಟರಿ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಾನೂನು ಅರಿವು ಶಿಬಿರದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಬಾಲಾಪರಾಧಗಳ ಜೊತೆಗೆ ಬಾಲ್ಯ ವಿವಾಹಗಳೂ ಹೆಚ್ಚುತ್ತಿವೆ. ವಿದ್ಯಾರ್ಥಿಗಳು ಇಂತಹ ವಿಚಾರಗಳ ಬಗ್ಗೆ ಜಾಗೃತರಾಗಬೇಕು. ಕಾನೂನು ಬಾಹಿರವಾದ ಇಂತಹ ಪ್ರಕರಣಗಳನ್ನು ತಡೆಯಲು ಮುಂದಾಗಬೇಕು ಎಂದು ಕರೆನೀಡಿದರು.
ಸಮಾಜ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು. ಅಪಮಾನ, ದೌರ್ಜನ್ಯಗಳನ್ನು ತಡೆಯಬೇಕು. ಬಾಲ ಕಾರ್ಮಿಕರು, ಬಾಲ್ಯ ವಿವಾಹ ಇನ್ನಿತರೆ ದೌರ್ಜನ್ಯಗಳು ಕಂಡು ಬಂದಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ಮುಖ್ಯಸ್ಥರು ಹಾಗೂ ಪೊಲೀಸರ ಗಮನಕ್ಕೆ ತರಬೇಕು. ನಮ್ಮ ಕಲೆ, ಸಂಸ್ಕೃತಿ, ರಾಷ್ಟ್ರಧ್ವಜ, ರಾಷ್ಟ್ರಗೀತೆಗಳಿಗೆ ಅದರದ್ದೇ ಆದ ಕಾನೂನಿನ ಚೌಕಟ್ಟುಗಳಿವೆ. ಅದನ್ನು ಮೀರಿ ಯಾರೂ ನಡೆದುಕೊಳ್ಳಬಾರದು ಎಂದು ಸಲಹೆ ಮಾಡಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷೆ ಎ.ಆರ್.ಲೇಖಾ ಮಾತನಾಡಿ, ಚಿಕ್ಕವಯಸ್ಸಿನಿಂದಲೇ ಕಾನೂನನ್ನು ಗೌರವಿಸುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೀರ್ತಿ ಶೇಠ್, ಖಜಾಂಚಿ ಸವಿತ ಆರ್.ಮೋಕ್ಷಾ, ಟಿಎಂಎಸ್ ಕಾರ್ಯದರ್ಶಿ ನೇತ್ರ ವೆಂಕಟೇಶ್, ಪ್ರಾಂಶುಪಾಲ ಇಂದ್ರೇಶ್, ಅನುಸೂಯ ಉಪಸ್ಥಿತರಿದ್ದರು. ನಟರಾಜ್ ಸ್ವಾಗತಿಸಿ, ವಂದಿಸಿದರು.







