ಟೆಕ್ಸಾಸ್ ಜಲಾವೃತ : ಭಾರತೀಯ ವಿದ್ಯಾರ್ಥಿಗಳ ಪರಿಸ್ಥಿತಿ ಇನ್ನೂ ಗಂಭೀರ
200 ವಿದ್ಯಾರ್ಥಿಗಳು ಸುರಕ್ಷಿತ

ವಾಶಿಂಗ್ಟನ್, ಆ. 29: ಪ್ರವಾಹದಿಂದ ಅಸ್ವಸ್ಥಗೊಂಡಿರುವ ಟೆಕ್ಸಾಸ್ ಎ ಆ್ಯಂಡ್ ಎಂ ವಿಶ್ವವಿದ್ಯಾನಿಲಯದ ಇಬ್ಬರು ವಿದ್ಯಾರ್ಥಿಗಳ ಪರಿಸ್ಥಿತಿ ಸೋಮವಾರ ಗಂಭೀರವಾಗಿಯೇ ಮುಂದುವರಿದಿದೆ. ಆದರೆ, ಹ್ಯೂಸ್ಟನ್‌ನಲ್ಲಿ ಪ್ರವಾಹದಿಂದ ಸುತ್ತುವರಿಯಲ್ಪಟ್ಟಿರುವ ಇತರ 200 ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ ಹಾಗೂ ಅವರಿಗೆ ಹೊಸದಾಗಿ ಆಹಾರ ಸರಬರಾಜು ಮಾಡಲಾಗಿದೆ.
ಈ ನಡುವೆ, ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಸತತನ ನಾಲ್ಕನೆ ದಿನವಾದ ಸೋಮವಾರವೂ ಧಾರಾಕಾರ ಮಳೆ ಸುರಿಯುತ್ತಿದ್ದು, ಮೃತರ ಸಂಖ್ಯೆ ಒಂಬತ್ತನ್ನು ತಲುಪಿದೆ.
ಗಂಭೀರವಾಗಿ ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ತಲುಪಲು ಅವರ ಕುಟುಂಬಿಕರು ಮತ್ತು ಸಂಬಂಧಿಕರಿಗೆ ಭಾರತೀಯ ಅಧಿಕಾರಿಗಳು ನೆರವು ನೀಡುತ್ತಿದ್ದಾರೆ.
ಅದೇ ವೇಳೆ, ಹ್ಯೂಸ್ಟನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳನ್ನು ಅಧಿಕಾರಿಗಳೂ ತಲುಪಿದ್ದಾರೆ. ಮುಸ್ಲಿಮ್ ಅಸೋಸಿಯೇಶನ್ ಆಫ್ ಗ್ರೇಟರ್ ಹ್ಯೂಸ್ಟನ್ ಮತ್ತು ಸ್ವಾಮಿನಾರಾಯಣ್ ದೇವಸ್ಥಾನಗಳು ಪೂರೈಸಿರುವ ಟ್ರಕ್‌ಗಟ್ಟಳೆ ಆಹಾರ ಪದಾರ್ಥವನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ.
‘‘ಸದ್ಯಕ್ಕೆ ಅವರು ಎಲ್ಲಿ ಇದ್ದಾರೋ ಅಲ್ಲೇ ತಂಗಿದ್ದಾರೆ. ನೀರಿನ ಮಟ್ಟ ಇಳಿದಿದೆ ಹಾಗೂ ವಿದ್ಯುತ್ ಪೂರೈಕೆ ಆರಂಭವಾಗಿದೆ’’ ಎಂದು ಭಾರತೀಯ ಕಾನ್ಸುಲ್ ಜನರಲ್ ಅನುಪಮ್ ರೇ ತಿಳಿಸಿದರು.







