ರೈತರಿಗೆ ನಂ.1 ಪ್ರಾಮಾಣೀಕೃತ ಬಿತ್ತನೆ ಬೀಜ: ಕೃಷ್ಣ ಭೈರೇಗೌಡ

ತುಮಕೂರು, ಆ.29: ಹೆಚ್ಚಿನ ಶ್ರಮವಹಿಸಿ ದುಡಿಯುವ ರೈತರಿಗೆ ಉತ್ತಮ ಇಳುವರಿ ಪಡೆಯಲು ನಂಬರ್-1 ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಪೂರೈಸಲು ಸರಕಾರ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಮುಂದಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿ ರೂ. 357 ಲಕ್ಷ ರೂ. ವೆಚ್ಚದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ ವತಿಯಿಂದ ನಿರ್ಮಿಸಿರುವ ಬಿತ್ತನೆ ಬೀಜ ಸಂಸ್ಕರಣ ಘಟಕವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಶ್ರಮವಹಿಸಿ ಇದ್ದ ಬದ್ದ ಬಂಡವಾಳ ಹಾಕಿ ಕೃಷಿ ಮಾಡುವ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಒದಗಿಸದಿದ್ದರೆ ರೈತನ ಶ್ರಮ ಹಾಗೂ ಹಣ ಎಲ್ಲವೂ ಮಣ್ಣುಪಾಲಾಗುತ್ತದೆ. ಇದನ್ನರಿತ ರಾಜ್ಯ ಸರಕಾರ ರೈತರಿಂದಲೇ ಬಿತ್ತನೆ ಬೀಜಗಳನ್ನು ಉತ್ಪಾದಿಸಿ ಶೇ.100 ರಷ್ಟು ಉತ್ತಮ ಗುಣಮಟ್ಟದ ಪ್ರಾಮಾಣಿಕೃತ ನಂಬರ್-1 ಬಿತ್ತನೆ ಬೀಜಗಳನ್ನು ರೈತರಿಗೆ ಸರಬರಾಜು ಮಾಡಲು ಮುಂದಿನ ಮೂರು ವರ್ಷರ್ಗಳ ಬೇಡಿಕೆಯನ್ನು ಆಧರಿಸಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಕಳೆದ ಹಲವಾರು ವರ್ಷಗಳಿಂದ ರೈತರು ಬಿತ್ತನೆ ಮಾಡುವ ಸಮಯ ಪ್ರಾರಂಭವಾಗುವ ಹೊತ್ತಿಗೆ ಬೀಜ ಒದಗಿಸಲು ಏಪ್ರಿಲ್‍ನಲ್ಲಿ ಬಿತ್ತನೆ ಬೀಜ ಪೂರೈಕೆ ಮಾಡಲು ಬಿತ್ತನೆ ಬೀಜ ಒದಗಿಸುವ ಸಂಸ್ಥೆಗಳಿಗೆ ಬೇಡಿಕೆ ನೀಡಿ ಖರೀದಿಸಲಾಗುತ್ತಿತ್ತು. ಈ ರೀತಿ ತರಾತುರಿಯಲ್ಲಿ ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದರಿಂದ 2ನೇ ದರ್ಜೆಯ ಬಿತ್ತನೆ ಬೀಜಗಳು ಸರಬರಾಜು ಆಗುತ್ತಿದ್ದವು. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದರು.ಇದೀಗ ಇದನ್ನು ತಪ್ಪಿಸಿ ನಂಬರ್-1 ಪ್ರಾಮಾಣಿಕೃತ ಬಿತ್ತನೆ ಬೀಜ ಒದಗಿಸಲು ದೀರ್ಘಾವಧಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಿಂದೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳಿಗಾಗಿ ರೈತರು ಗುಂಡೇಟು ತಿಂದು ಪ್ರಾಣವನ್ನು ಕಳೆದುಕೊಂಡಿದ್ದ ಪರಿಸ್ಥಿತಿ ತಪ್ಪಿಸಲು ಇಂದು ಸರ್ಕಾರ ರೈತರಿಗೆ ಉತ್ತಮ ಗುಣಮಟ್ಟದ ಸಂಸ್ಕರಿಸಿದ ಪ್ರಾಮಾಣಿಕೃತ ಬೀಜಗಳನ್ನು ರೈತರಿಂದಲೇ ಉತ್ಪಾದಿಸಿ ರಾಜ್ಯ ಬೀಜ ನಿಗಮದ ಮೂಲಕ ಮಾರಾಟ ಮಾಡಿಸಲಾಗುತ್ತಿದೆ ಎಂದ ಅವರು, ಮುಂದಿನ ದಿನಗಳಲ್ಲಿ ರೈತರಿಗೆ 2ನೇ ದರ್ಜೆ ಬಿತ್ತನೆ ಬೀಜಗಳನ್ನು ನೀಡದೆ ಮೊದಲ ದರ್ಜೆ ಧೃಡೀಕರಿಸಿದ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಲು ಮುಂಗಡ ಯೋಜನೆ ಮೂಲಕ ಎಲ್ಲಾ ಕ್ರಮ ವಹಿಸಲಾಗಿದೆ ಎಂದರು.
ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳು ಏಕಕಾಲದಲ್ಲಿ ಹೆಚ್ಚಿಗೆ ಸರಬರಾಜಾದಾಗ ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಅಂತಹ ಸಮಯದಲ್ಲಿ ರೈತರ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಸಂರಕ್ಷಿಸಿಡಲು ನಬಾರ್ಡ್‍ನ ರೂ.775 ಕೋಟಿ ನೆರವಿನಿಂದ ಹಾಗೂ ಕೃಷಿ ಇಲಾಖೆ ಅನುದಾನ ಸೇರಿ ಒಟ್ಟು 998 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಮಾದರಿಯ 22.78 ಲಕ್ಷ ಟನ್ ಸಾಮರ್ಥ್ಯದ ಗೋದಾಮುಗಳನ್ನು ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಸಿರಿಧಾನ್ಯಗಳ ಸಂಸ್ಕರಣೆಗೆ ಒಂದು ಸಂಸ್ಕರಣಾ ಘಟಕ ಹಾಗೂ ಪ್ರತ್ಯೇಕ ಗೋದಾಮು ಈ ಭಾಗದಲ್ಲಿ ಆರಂಭಿಸುವಂತೆ ಕೃಷಿ ಸಚಿವರಲ್ಲಿ ಮನವಿ ಮಾಡಿದರು.
ವಿಧಾನ ಪರಿಷತ್ ಶಾಸಕ ರಮೇಶ್ ಬಾಬು ಮಾತನಾಡಿ, ಶಿರಾದಲ್ಲಿ ಆರಂಭಿಸಿರುವ ಬಿತ್ತನೆ ಬೀಜ ಸಂಸ್ಕರಣಾ ಘಟಕ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಇದೇ ರೀತಿ ಜಿಲ್ಲೆಯ ಇತರೆ ತಾಲೂಕುಗಳಿಗೂ ಗೋದಾಮುಗಳನ್ನು ನಿರ್ಮಿಸಿಕೊಡುವಂತೆ ಬೇಡಿಕೆ ಇಟ್ಟರು.
ತುಮಕೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಕರ್ನಾಟಕ ರಾಜ್ಯ ಬೀಜ ನಿಗಮದ ನಿರ್ದೇಶಕರಾದ ವಡಗೂರು ಡಿ.ಎಲ್.ನಾಗರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ವಿ.ಡಿ.ರೂಪಾದೇವಿ ಮತ್ತಿತರರು ಉಪಸ್ಥಿತರಿದ್ದರು.







