ತ್ಯಾಜ್ಯವನ್ನು ಸದ್ಬಳಕೆ ಮಾಡಿಕೊಂಡರೆ ಉತ್ತಮ ಆದಾಯ ಗಳಿಸಬಹುದು: ಡಾ.ಅನು ಅಪ್ಪಯ್ಯ

ದಾವಣಗೆರೆ, ಆ.29: ಪಟ್ಟಣಗಳಲ್ಲಿ ತ್ಯಾಜ್ಯ ವಿಲೇವಾರಿ ದೊಡ್ಡ ತಲೆನೋವಾಗಿ ಪರಿಣಾಮಿಸಿದ್ದು, ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಲ್ಲಿ ಅದರಿಂದ ಉತ್ತಮ ಆದಾಯ ಪಡೆದುಕೊಳ್ಳಬಹುದು ಎಂದು ಮೈಸೂರು ಸಿಎಫ್‍ಟಿಆರ್‍ಐ ಮುಖ್ಯ ವಿಜ್ಞಾನಿ ಡಾ.ಅನು ಅಪ್ಪಯ್ಯ ತಿಳಿಸಿದರು.
ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಜೈವಿಕ ತಂತ್ರಜ್ಞಾನ ಸೆಮಿನಾರ್ ಹಾಲ್‍ನಲ್ಲಿ ಬುಧವಾರ ಜೈವಿಕ ತಂತ್ರಜ್ಞಾನ ವಿಭಾಗದ ಚಟುವಟಿಕೆಗಳ ಉದ್ಘಾಟನೆ ಹಾಗೂ ಮೂರನೆ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತ್ಯಾಜ್ಯದಲ್ಲಿ ಸಂಪನ್ಮೂಲ ವಸ್ತು ಒಳಗೊಂಡಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಅದರಿಂದ ಉತ್ಪತ್ತಿಯಾಗುವ ವಸ್ತುಗಳನ್ನು ಮರು ಬಳಕೆ ಮಾಡಿಕೊಳ್ಳಬಹುದು ಎಂದರು.
ಸಂಶೋಧನೆ ಮಾಡುವುದಕ್ಕೆ ಸಾಕಷ್ಟು ಅವಕಾಶಗಳಿದ್ದು, ತ್ಯಾಜ್ಯ ವಸ್ತುಗಳ ಬಳಕೆಗೆ ಸಂಬಂಧಿಸಿದಂತೆ ಶೋಧನೆ ಮಾಡಿ ತ್ಯಾಜ್ಯ ವಸ್ತುಗಳ ವಿಭಿನ್ನ ವಿಂಗಡಣೆ ಮಾಡುವುದು ಕಷ್ಟಕರವಾಗುತ್ತಿದ್ದು, ಅದನ್ನು ಯಶಸ್ವಿಗೊಳಿಸಿದೆ ತ್ಯಾಜ್ಯ ವಿಲೇವಾರಿಗೆ ಸಹಕಾರಿಯಾಗುತ್ತದೆ ಎಂದ ಅವರು, ತ್ಯಾಜ್ಯ ವಸ್ತುಗಳಾದ ಬಾಟಲಿ ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಶೇಖರಣೆ ಮಾಡಿ ಒಂದೆಡೆ ಸೇರಿಸಿ ಅದನ್ನು ಹರಾಜು ಹಾಕಿ ಅದರಿಂದ ಆದಾಯವನ್ನು ಪಡೆದುಕೊಳ್ಳಬಹುದು ಎಂದರು.
ಬಿಐಇಟಿ ನಿರ್ದೇಶಕ ಪ್ರೊ.ವೈ. ವೃಷಬೇಂದ್ರಪ್ಪ ಮಾತನಾಡಿ, ದೇಶದಲ್ಲಿ 125 ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ ಶೇ. 50ರಷ್ಟು ಜನರು ಶುದ್ಧೀಕರಿಸಿದ ನೀರನ್ನು ಕುಡಿಯುತ್ತಿದ್ದು, ಪ್ರತೀ ಲೀಟರ್ ನೀರನ್ನು ಶುದ್ಧೀಕರಣಕ್ಕೆ 4 ಲೀಟರ್ ಲವಣಾಂಶ ಬರುತ್ತಿದ್ದು, ಟಿಡಿಎಸ್ ಮಟ್ಟ 800ರಿಂದ 1200ರ ವರೆಗೂ ಒಳಗೊಂಡಿದ್ದು, ಅದನ್ನು ಕರಗಿಸುವಂತಹ ಬ್ಯಾಕ್ಟೀರಿಯಾ ಉತ್ಪಾದನೆ ಮಾಡಿದ್ದಲ್ಲಿ ಕಲುಷಿತ ನೀರನ್ನು ಸಹ ಮರು ಬಳಕೆ ಮಾಡಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಎಸ್. ಸುಬ್ರಹ್ಮಣ್ಯ ಸ್ವಾಮಿ, ವಿಭಾಗದ ಮುಖ್ಯಸ್ಥ ಡಾ.ಬಿ.ಇ. ರಂಗಸ್ವಾಮಿ ಮತ್ತಿತರರಿದ್ದರು.







