ಶಿಕ್ಷಕರು,ಪೋಷಕರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು: ನರೇಂದ್ರ ಒಡೆಯರ್

ಸೊರಬ, ಆ.29: ಶಿಕ್ಷಕರು, ಅಧಿಕಾರಿಗಳ ಪ್ರಯತ್ನದಿಂದಾಗಿ ತಾಲೂಕು ಶೈಕ್ಷಣಿವಾಗಿ ಉತ್ತಮ ಸಾಧನೆಯ ಹಾದಿಯಲ್ಲಿರುವುದು ಸಂತೋಷದ ಸಂಗತಿಯಾಗಿದೆ ಎಂದು ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ನರೇಂದ್ರ ಒಡೆಯರ್ ತಿಳಿಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕಿರಿಯ-ಹಿರಿಯ ಪ್ರಾಥಮಿಕ ಹಾಗು ಪ್ರೌಢಶಾಲೆಗಳ ಸಾಂಸ್ಕೃತಿಕ ಸ್ಪರ್ಧೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಖಾಸಗಿ ಶಾಲೆಗಳಿಗೆ ಪ್ರತಿಸ್ಪರ್ಧಿಯಾಗಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟವನ್ನು ಹೆಚ್ಚಿಸುವ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತಿದೆ. ಶಿಕ್ಷಕರು ಹಾಗೂ ಪೋಷಕರು ಸೇರಿದಂತೆ ತಮ್ಮ ಜವಾಬ್ದಾರಿ ಅರಿತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದ ಅವರು, ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕಾಪಾಡುವ ಜತೆಗೆ ಸಾಂಸ್ಕೃತಿಕವಾಗಿ ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ತಾಪಂ ಸದಸ್ಯೆ ಜ್ಯೋತಿ ನಾರಾಯಣಪ್ಪ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆ ಪಲಾಯನಗೊಳ್ಳದಂತೆ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ವೇದಿಕೆ ಕಲ್ಪಿಸಿಕೊಡುವುದು ಅಗತ್ಯವಾಗಿದ್ದು, ಮಕ್ಕಳಲ್ಲಿನ ಉತ್ತಮ ನಡೆ ನುಡಿಗಳು ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬಲ್ಲದು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು. ಬಿಆರ್‍ಸಿ ಸಮನ್ವಯಾಧಿಕಾರಿ ಎಚ್.ಜಿ. ಆಂಜನೇಯ ಸ್ವಾಗತಿಸಿದರು.
ತಾಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಅಂಜಲಿ ಸಂಜೀವ್, ನಾಗರಾಜ್ ಚಿಕ್ಕಸವಿ, ನಾಗರಾಜ್ ಚಂದ್ರಗುತ್ತಿ, ಪಪಂ ಉಪಾಧ್ಯಕ್ಷೆ ರತ್ನಮ್ಮ, ಶಿವಮೂರ್ತಿ, ಚಂದ್ರಪ್ಪ ಜಾಲಗಾರ್, ಎಚ್.ಜಿ.ಗಣಪತಿ, ಪ್ರೇಮಕುಮಾರ್, ಶೇಖರ್ ನಾಯಕ್, ಪ್ರಕಾಶ ಮಡ್ಲೂರ್, ಬಸವರಾಜ್ ಜಡ್ಡಿಹಳ್ಳಿ ಹಾಜರಿದ್ದರು.







