ಗುರ್ಮೀತ್ ಪ್ರಕರಣ ಧಾರ್ಮಿಕ ಮುಖಂಡರಿಗೆ ಮುಜುಗರ: ರಾಮ್‌ದೇವ್

ಇಂದೋರ್, ಆ.29: ಅತ್ಯಾಚಾರ ಪ್ರಕರಣದ ದೋಷಿ ಗುರ್ಮಿತ್ ಸಿಂಗ್‌ಗೆ ಶಿಕ್ಷೆಯಾಗಿರುವುದನ್ನು ಶ್ಲಾಘಿಸಿರುವ ಯೋಗ ಗುರು ಬಾಬಾ ರಾಮ್‌ದೇವ್, ಗುರ್ಮಿತ್ ನಂತಹ ‘ಪ್ರಕರಣ’ಗಳು ಧಾರ್ಮಿಕ ಮುಖಂಡರಿಗೆ ಮುಜುಗರಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.
ಕಳೆದ ಎರಡು ಮೂರು ವರ್ಷಗಳಿಂದ ಬಹಿರಂಗಗೊಳ್ಳುತ್ತಿರುವ ಇಂತಹ ಘಟನೆಗಳಿಂದ ನಾವು ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದೇವೆ. ಆದರೆ ಇಂತಹ ಘಟನೆಯ ಬಳಿಕ ಎಲ್ಲಾ ಸಾಧು-ಸನ್ಯಾಸಿಗಳನ್ನೂ ಕೆಟ್ಟವರೆಂದು ಪರಿಗಣಿಸಬಾರದು ಎಂದು ರಾಮ್‌ದೇವ್ ಹೇಳಿದರು. ದೇಶದಲ್ಲಿ ಈಗಲೂ ಜನಸಾಮಾನ್ಯರ ಸೇವೆಗೆ ಬದುಕನ್ನು ಮುಡಿಪಾಗಿಟ್ಟಿರುವ, ಪ್ರಾಮಾಣಿಕ, ಪರಿಶುದ್ಧ ಸನ್ಯಾಸಿಗಳಿದ್ದಾರೆ. ಶ್ರೀರಾಮ ಭಾರತೀಯ ಸಂಸ್ಕೃತಿಯ ಉನ್ನತ ಪ್ರತೀಕವಾಗಿದ್ದು, ಇಂತಹ ಹೆಸರನ್ನು ಇರಿಸಿಕೊಂಡ ವ್ಯಕ್ತಿಯೋರ್ವ ಆ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ವರ್ತಿಸಿದರೆ ಅದು ಆತನ ನಡತೆಯನ್ನು ಪ್ರತಿಬಿಂಬಿಸುತ್ತದೆ. ಇದು ಧರ್ಮ, ಸಂಪ್ರದಾಯ ಅಥವಾ ಸಂಸ್ಕೃತಿ ಎಸಗಿದ ಅಪಚಾರವಲ್ಲ ಎಂಬುದನ್ನು ಗಮನಿಸಬೇಕು ಎಂದು ರಾಮ್‌ದೇವ್ ಹೇಳಿದರು. ಶತಮಾನಗಳ ಹಿಂದಿನಿಂದಲೂ ನಮ್ಮ ಋಷಿಮುನಿಗಳು ಹಾಕಿಕೊಟ್ಟ ಸದಾಚಾರ ಸಂಹಿತೆಯನ್ನು ಪಾಲಿಸುವಂತೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮುಖಂಡರಿಗೆ ಅವರು ಕರೆ ನೀಡಿದರು.
ಆದರೆ ಗುರ್ಮಿತ್ ಸಿಂಗ್‌ಗೆ ಬೆಂಬಲ ಸೂಚಿಸಿದವರಲ್ಲಿ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಕೂಡಾ ಒಬ್ಬರು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು. ಅತ್ಯಾಚಾರದ ಪ್ರಕರಣದಲ್ಲಿ ಗುರ್ಮಿತ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದಾಗ ಸಾಕ್ಷಿ ಮಹಾರಾಜ್ ನೀಡಿದ್ದ ಹೇಳಿಕೆ ಹೀಗಿತ್ತು- ಗುರ್ಮಿತ್ ಅತ್ಯಾಚಾರ ಎಸಗಿರುವುದಾಗಿ ಒಬ್ಬರು ದೂರು ನೀಡಿದ್ದರೆ, ಅವರೋರ್ವ ದೇವಮಾನವ ಎಂಬುದಾಗಿ ಕೋಟ್ಯಾಂತರ ಮಂದಿ ನಂಬುತ್ತಾರೆ. ಹಾಗಾದರೆ ಯಾರು ಸರಿ ನೀವೇ ಹೇಳಿ ಎಂದು ಪ್ರಶ್ನಿಸಿದ್ದರು ಈ ಸಂಸದ.







