ವೈವಾಹಿಕ ಅತ್ಯಾಚಾರ ಅಪರಾಧವೆಂದು ಪರಿಗಣಿಸಿದರೆ ವೈವಾಹಿಕ ವ್ಯವಸ್ಥೆಗೆ ಧಕ್ಕೆ: ಕೇಂದ್ರ ಸರಕಾರ

ಹೊಸದಿಲ್ಲಿ, ಆ.29: ವೈವಾಹಿಕ ಅತ್ಯಾಚಾರ ಪ್ರಕರಣವನ್ನು ಅಪರಾಧ ಎಂದು ಪರಿಗಣಿಸಿದರೆ ‘ವೈವಾಹಿಕ ವ್ಯವಸ್ಥೆಗೆ’ ಧಕ್ಕೆಯಾದೀತು ಮತ್ತು ಪತಿಯನ್ನು ಪೀಡಿಸಲು ಪತ್ನಿಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಕೇಂದ್ರ ಸರಕಾರ ದಿಲ್ಲಿ ಹೈಕೋರ್ಟ್‌ನಲ್ಲಿ ಹೇಳಿಕೆ ನೀಡಿದೆ.
ವೈವಾಹಿಕ ಅತ್ಯಾಚಾರವನ್ನೂ ಕಾನೂನಿನಡಿ ಪರಿಗಣಿಸಿ ಶಿಕ್ಷೆ ನೀಡಬೇಕು ಎಂದು ಮಹಿಳಾ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಹೇಳಿಕೆ ನೀಡಿದ ಕೇಂದ್ರ ಸರಕಾರದ ಪರ ವಕೀಲರು, ಪತಿ-ಪತ್ನಿಯ ಮಧ್ಯೆ ನಡೆಯುವ ದೈಹಿಕ ಸಂಬಂಧದ ದೀರ್ಘಕಾಲ ಪುರಾವೆ ಇರಲು ಸಾಧ್ಯವಿಲ್ಲ. ಅಲ್ಲದೆ ವೈವಾಹಿಕ ಅತ್ಯಾಚಾರ ಅಪರಾಧ ಎಂದು ಪರಿಗಣಿಸಿದರೆ ಗಂಡಂದಿರನ್ನು ಪೀಡಿಸಲು ಪತ್ನಿಯರಿಗೆ ಸುಲಭ ಸಾಧನ ದೊರೆತಂತಾಗುತ್ತದೆ. ಅಲ್ಲದೆ ವೈವಾಹಿಕ ವ್ಯವಸ್ಥೆಯೇ ದುರ್ಬಲಗೊಳ್ಳಬಹುದು ಎಂದು ಹೇಳಿದರು. ಸಂಸದೀಯ ಸಮಿತಿಯ ವರದಿಯಲ್ಲಿ ಕೇಂದ್ರ ಸರಕಾರದ ಹೇಳಿಕೆಯನ್ನು ದೃಢೀಕರಿಸಲಾಗಿದೆ.
ಐಪಿಸಿಯ 375ನೇ ವಿಧಿಯ ಪ್ರಕಾರ, ಪತ್ನಿ 15 ವರ್ಷದ ಮೇಲಿನವಳಾಗಿದ್ದರೆ ಅವಳೊಡನೆ ಪತಿ ನಡೆಸುವ ದೈಹಿಕ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸುವಂತಿಲ್ಲ. ಈ ವಿಧಿಯನ್ನು ರದ್ದುಗೊಳಿಸಿ, ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಬೇಕು ಎಂದು ಮಹಿಳಾ ಸಂಘಟನೆಗಳು ಒತ್ತಾಯಿಸುತ್ತಿವೆ.
ಈ ಮಧ್ಯೆ, ಮಿರೆರಾಂನ ಮಾಜಿ ರಾಜ್ಯಪಾಲ, ಹಿರಿಯ ವಕೀಲ ಹಾಗೂ ಸಚಿವೆ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಟ್ವಿಟರ್‌ನಲ್ಲಿ ನೀಡಿರುವ ಹೇಳಿಕೆಯಲ್ಲಿ- ವೈವಾಹಿಕ ಅತ್ಯಾಚಾರ ಎಂಬುದಕ್ಕೆ ಅರ್ಥವಿಲ್ಲ. ನಮ್ಮ ಮನೆಗಳು ಪೊಲೀಸ್ ಠಾಣೆಗಳಾಗಬಾರದು. ಮನೆಯಲ್ಲಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗಂಡಂದಿರು ಜೈಲಿನಲ್ಲಿರಬಹುದು ಎಂದು ಹೇಳಿಕೆ ನೀಡಿದ್ದಾರೆ.







