ಹಾದಿಯಾ ಪ್ರಕರಣದಲ್ಲಿ ನೇತೃತ್ವ ವಹಿಸಿಕೊಳ್ಳಲಾರೆ : ಜಸ್ಟೀಸ್ ರವೀಂದ್ರನ್

ಹೊಸದಿಲ್ಲಿ,ಆ. 30: ಹಾದಿಯಾ ಪ್ರಕರಣದಲ್ಲಿ ಎನ್‍ಐಎ ತನಿಖೆಗೆ ತಾನು ನೇತೃತ್ವ ವಹಿಸುವುದಿಲ್ಲ ಎಂದು ನಿವೃತ್ತ ಸುಪ್ರೀಂಕೋರ್ಟು ನ್ಯಾಯಾಧೀಶ ಜಸ್ಟಿಸ್ ಆರ್.ವಿ. ರವೀಂದ್ರನ್ ತಿಳಿಸಿದ್ದಾರೆ. ತಾನು ಈವಿಷಯವನ್ನು ಸುಪ್ರೀಂಕೋರ್ಟಿಗೆ ತಿಳಿಸಿದ್ದೇನೆ ಎಂದು ಅವರು ಹೇಳಿದರು. ಇದರೊಂದಿಗೆ ನೇತೃತ್ವ ವಹಿಸುವವರಿಗಾಗಿ ಎನ್‍ಐಎ ಸುಪ್ರೀಂಕೋರ್ಟಿನ ಮೊರೆಹೋಗಲಿದೆ.
ಹಾದಿಯಾ ಪ್ರಕರಣವನ್ನು ಎನ್‍ಐಎ ತನಿಖೆ ನಡೆಸಬೇಕೆಂದು ಸುಪ್ರೀಂಕೋರ್ಟು ಆದೇಶ ಹೊರಡಿಸಿತ್ತು. ಸರಿಯಾದ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಮತ್ತು ಕೋರ್ಟಿನ ಸೂಚನೆ ಪಾಲನೆಯಾಗುತ್ತಿದೆ ಎಂದು ದೃಢಪಡಿಸಲಿಕ್ಕಾಗಿ ಜಸ್ಟೀಸ್ ರವೀಂದ್ರನ್‍ರನ್ನು ಸುಪ್ರೀಂಕೋರ್ಟು ನೇಮಿಸಿತ್ತು. ಆದರೆ, ಸ್ವತಂತ್ರ ಮತ್ತು ನ್ಯಾಯಯುತ ನೇತೃತ್ವ ವಹಿಸಲಿಕ್ಕಾಗಿ ಕೇರಳದ ಹೊರಗಿನ ವ್ಯಕ್ತಿ ಬೇಕೆಂದು ನ್ಯಾಯವಾದಿ ಕಪಿಲ್ ಸಿಬಲ್ ವಾದಿಸಿದ್ದರು. ನಿವೃತ್ತ ನ್ಯಾಯಾಧೀಶರಾದ ಟಿ.ಎಸ್. ಠಾಕೂರ್, ಆರ್.ವಿ. ರವೀಂದ್ರನ್‍ರ ಹೆಸರನ್ನು ಸೂಚಿಸಿದ್ದರು. ಇದರಲ್ಲಿ ಜಸ್ಟೀಸ್ ಆರ್.ವಿ. ರವೀಂದ್ರನ್‍ರ ಹೆಸರನ್ನು ಕೋರ್ಟು ಅಂಗೀಕರಿಸಿತ್ತು.
ಮದುವೆ ರದ್ದು ಪಡಿಸಿದ ಹೈಕೋರ್ಟು ತೀರ್ಪಿನ ವಿರುದ್ಧ ಹಾದಿಯಾಳ ಪತಿ ಶಫಿನ್ ಜಹಾನ್ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟು ಎನ್‍ಐಎ ತನಿಖೆಗೆ ಆದೇಶ ಹೊರಡಿಸಿತ್ತು.





