ಧರ್ಮದ ಚೌಕಟ್ಟು ಮೀರದಂತೆ ಬಕ್ರೀದ್ ಆಚರಿಸಿ: ಅಬೂಸುಫಿಯಾನ್ ಇಬ್ರಾಹೀಂ ಮದನಿ

ಮಡಿಕೇರಿ, ಆ.30 : ಬಕ್ರೀದ್ ಎಂಬ ಈದುಲ್ ಆಝ್‍ಹಾ ಮುಸ್ಲಿಮರ ಸಂಭ್ರಮೋಲ್ಲಾಸ ಹಬ್ಬವಾದರೂ ಆಚರಣೆಯಲ್ಲಿ ಧರ್ಮದ ಚೌಕಟ್ಟನ್ನು ಮೀರಕೂಡದು ಎಂದು ಮಡಿಕೇರಿಯ ಬದ್ರಿಯಾ ಮಸೀದಿಯ ಧರ್ಮ ಗುರು ಅಬೂಸುಫಿಯಾನ್ ಎಚ್.ಐ.ಇಬ್ರಾಹಿಂ ಮದನಿ ಸಮುದಾಯ ಬಾಂಧವರಿಗೆ ಕಿವಿಮಾತು ಹೇಳಿದ್ದಾರೆ.
ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಮಡಿಕೇರಿಯ ಕಾವೇರಿ ಮಿನಿ ಹಾಲ್‍ನಲ್ಲಿ ಬಕ್ರೀದ್ ಆಚರಣೆಯ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೂರ್ವ ಪ್ರವಾದಿ ಇಬ್ರಾಹೀಂ ಹಾಗೂ ಅವರ ಪುತ್ರ ಇಸ್ಮಾಯೀಲ್ ಅವರ ತ್ಯಾಗ ಬಲಿದಾನಗಳ ಹಬ್ಬವೇ ಬಕ್ರೀದ್ ಆಗಿದೆ. ಭಗವಂತನೊಂದಿಗೆ ಕಾಡಿ ಬೇಡಿ ದೊರೆತ ಕಣ್ಮಣಿ ಪುತ್ರ ಇಸ್ಮಾಯೀಲ್ ಎಂಬ ಬಾಲಕನನ್ನು ದೈವಾಜ್ಞೆಗನುಸಾರವಾಗಿ ಬಲಿ ಅರ್ಪಿಸಲು ಮುಂದಾದ ಪ್ರವಾದಿ ಇಬ್ರಾಹೀಂ ಅವರು ಪರೀಕ್ಷೆಯಲ್ಲಿ ವಿಜಯಿಯಾದ ಸುದಿನವೇ ಬಕ್ರೀದ್ ಎಂದು ಅಬೂಸುಫಿಯಾನ್ ಹೇಳಿದರು.
ಪುತ್ರ ಮರಳಿ ದೊರೆತ ಸಂತೋಷಾರ್ಥ ದೈವಾಜ್ಞೆಯಂತೆ ಆಡನ್ನು ಅಲ್ಲಾಹನಿಗೆ ಬಲಿ ಅರ್ಪಿಸಿದುದರ ಧ್ಯೋತಕವಾಗಿ ಬಕ್ರೀದ್‍ನಂದು ಎಲ್ಲಾ ಮುಸ್ಲಿಂ ಬಾಂಧವರು ತಮ್ಮ ಶಕ್ತ್ಯಾನುಸಾರ ಬಡವರಿಗೆ, ಬಂಧು ಮಿತ್ರರಿಗೆ, ನೆರೆಯವರಿಗೆ ದಾನ ಧರ್ಮ ಮಾಡುವುದು ಪುಣ್ಯದ ಕಾರ್ಯವೆಂದು ತಿಳಿಸಿದರು.
ಅನುಕೂಲ ಹಾಗೂ ಆರೋಗ್ಯ ಇರುವ ಪ್ರತಿಯೋರ್ವ ಮಸ್ಲಿಮನು ಕಡ್ಡಾಯವಾಗಿ ಪವಿತ್ರ ಹಜ್ ಕರ್ಮ ನಿರ್ವಹಿಸಬೇಕಾಗುತ್ತದೆ. ಭಕ್ತಿಯಿಂದ ಹಜ್ ನಿರ್ವಹಿಸಿದಾತನ ಎಲ್ಲ ಪಾಪಗಳು ಪರಿಹರಿಸಲ್ಪಡಲಿವೆ ಎಂದು ಅವರು, ಹಬ್ಬದ ಸಂದರ್ಭ ವಿಕಲಚೇತನರಿಗೆ, ವಿಧವೆಯರಿಗೆ ಹಾಗೂ ಕಡು ಬಡವರಿಗೆ ಆರ್ಥಿಕ ನೆರವನ್ನು ನೀಡಿದಲ್ಲಿ ಹೆಚ್ಚಿನ ಪುಣ್ಯ ಲಭ್ಯವೆಂದು ದಾನದ ಮಹತ್ವವನ್ನು ವಿವರಿಸಿದರು.
ಈ ಸಂರ್ಭದಲ್ಲಿ ಅಲ್ ಅಮೀನ್ ಸಂಸ್ಥೆಯ ಅಧ್ಯಕ್ಷ ಎಫ್.ಎ.ಮೊಹಮ್ಮದ್ ಹಾಜಿ, ಕೋಶಾಧಿಕಾರಿ ಲತೀಫ್ ಹಾಜಿ, ಪದಾಧಿಕಾರಿ ಎಂ.ಇ.ಮೊಹಮ್ಮದ್ ಮತ್ತಿತರ ಉಪಸ್ಥಿತರಿದ್ದರು.







