ವಿದ್ಯಾನಗರ: ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ
.jpg)
ಹಾಸನ, ಆ.30: ವಿದ್ಯಾನಗರದ ಮನೆಯೊಂದರಲ್ಲಿ ಕಳ್ಳತನ ಮಾಡಲು ಹಿಂಬಾಗಿಲಿನಿಂದ ನುಗ್ಗಿರುವ ಕಳ್ಳರು ಮನೆ ಒಳಗೆ ಇದ್ದ ಲಕ್ಷಾಂತರ ರೂ ಬೆಲೆಬಾಳುವ ಚನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ದೋಚಿರುವ ಘಟನೆ ರಾತ್ರಿ ನಡೆದಿದೆ.
ವಿದ್ಯಾನಗರ ಕ್ರೈಸ್ಟ್ ಶಾಲೆ ಬಳಿ ಇರುವ ಗುತ್ತಿಗೆದಾರ ಸುಮ ಪರಶುರಾಮು ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಮಂಗಳವಾರ ರಾತ್ರಿ 8ರ ವೇಳೆ ಹಾಲುವಾಗಿಲು ಬಳಿ ಇರುವ ಅತ್ತಿಗೆ ಮನೆಯಲ್ಲಿನ ಕಾರ್ಯಕ್ರಮವೊಂದಕ್ಕೆ ಪರಶುರಾಮು ತನ್ನ ಕುಟುಂಬ ಸಮೇತವಾಗಿ ತೆರಳಿದ್ದಾರೆ. ಬುಧವಾರ ಬೆಳಗ್ಗೆ ಮನೆಗೆ ವಾಪಸ್ ಬಂದಾಗ ಕಳ್ಳತನ ಆಗಿರುವುದು ತಿಳಿದು ಬಂದಿದೆ.
ಮನೆ ಹಿಂಬಾಗಿಲಿನಿಂದ ಒಳ ನುಗ್ಗಿರುವ ಕಳ್ಳರು ದೇವರ ಬಾಗಿಲು ತೆರೆದು ಒಳ ಇದ್ದ ಪೂಜೆ ಸಾಮಾಗ್ರಿಯ ಬೆಳ್ಳಿ ಪದಾರ್ಥವನ್ನು ದೋಚಿದ್ದಾರೆ. ನಂತರದಲ್ಲಿ ಮಹಡಿ ಮೇಲೆ ತೆರಳಿ ಬೆಡ್ ರೂಂನ ಬೀರುವಿನಲ್ಲಿ ಇಡಲಾಗಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮಾಸ್ಕ್ ಧರಿಸಿದ ಇಬ್ಬರು ವ್ಯಕ್ತಿಗಳು ರಾತ್ರಿ ಮನೆ ಒಳ ನುಗ್ಗಿರುವ ಕಳ್ಳರ ಬಗ್ಗೆ ಬಳಿಯೇ ಇದ್ದ ಮನೆಯೊಂದರ ಸಿಸಿ ಕ್ಯಾಮರದಲ್ಲಿ ದೃಶ್ಯ ಕಂಡು ಬಂದಿದೆ ಎಂದು ಹೇಳಲಾಗಿದೆ.
ಮನೆ ಒಳಗೆ ನುಗ್ಗಿರುವ ಕಳ್ಳರು 40 ಗ್ರಾಂ ಬೆಲೆ ಬಾಳುವ ಒಂದು ಜೊತೆ ಚಿನ್ನದ ಬಳೆ, 13 ಗ್ರಾಮ ಬೆಲೆ ಬಾಳುವ ರಿಂಗ್, 60 ಗ್ರಾಂ ಬೆಲೆ ಬಾಳುವ 2 ಚೈನ್ ಹಾಗೂ ದೇವರ ಕೋಣೆಯಲ್ಲಿದ್ದ ಬೆಳ್ಳಿ ತಟ್ಟೆ, ಪಂಚಪಾತ್ರೆ, ಮಂಗಳಾರತಿ, ದೇವರ ವಿಗ್ರಹ, ನಾಲ್ಕು ಬೆಳ್ಳಿ ದೀಪ, ಮೂರು ಸಣ್ಣ ದೀಪ, ಗಂಟೆ ಹಾಗೂ ನಾಲ್ಕು ಸಾವಿರ ಹಣ ದೋಚಿದ್ದಾರೆ. ಸುಮಾರು 7 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಹೆಚ್ಚಿನ ಒಡವೆ ಕಳುವಾಗಿದೆ ಎನ್ನಲಾಗಿದೆ.
ವಿಷಯ ತಿಳಿದ ಪೊಲೀಸರು ಸ್ಥಳಕೆ ಶ್ವಾನದಳ ಹಾಗೂ ಬೆರಳಚ್ಚುಗಾರರ ಜೊತೆ ಆಗಮಿಸಿ ವಿವರ ಪಡೆದು ದೂರು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸುಮ ಪರಶುರಾಮು: ಕಳ್ಳತನಗೊಂಡ ಮನೆ ಮಾಲಕರು ಸುಮ ಪರಶುರಾಮು ಸುದ್ದಿಗಾರರೊಂದಿಗೆ ಮಾತನಾಡಿ, ಹಾಲುವಾಗಿಲುನಲ್ಲಿರುವ ಅತ್ತಿಗೆ ಮನೆಯ ಕಾರ್ಯಕ್ರಮವೊಂದಕ್ಕೆ ಮಂಗಳವಾರ ರಾತ್ರಿ ಸುಮಾರು 8-10ಕ್ಕೆ ಮನೆಯವರೆಲ್ಲರು ಕಾರ್ಯಕ್ರಮಕ್ಕೆ ತೆರಳಿದ್ದೆವು. ಮರುದಿನ ಬೆಳಗ್ಗೆ ಬಂದಾಗ ಕಳ್ಳತನವಾಗಿರುವ ಬಗ್ಗೆ ತಿಳಿದು ಬಂದಿದೆ. ಮನೆ ಹಿಂಬಾಗಿಲಿನಿಂದ ಒಳ ನುಗ್ಗಿರುವ ಕಳ್ಳರು ದೇವರ ಕೋಣೆಯಲ್ಲಿದ್ದ ಬೆಳ್ಳೆ ಪದಾರ್ಥ ಹಾಗೂ ಮಹಡಿ ಮೇಲೆ ಇದ್ದ ಬೀರು ಹೊಡೆದು ಒಳಗಿದ್ದ ಚಿನ್ನಾಭರಣವನ್ನು ದೋಚಿದ್ದಾರೆ ಎಂದರು.







