ಸದನದಲ್ಲಿ ಸರಕಾರದ ಬಹುಮತ ಪರೀಕ್ಷೆ : ವಿಪಕ್ಷಗಳ ಬೇಡಿಕೆಗೆ ತಮಿಳುನಾಡು ರಾಜ್ಯಪಾಲರ ನಕಾರ

ಚೆನ್ನೈ, ಆ.30: ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಸರಕಾರಕ್ಕೆ 19 ಶಾಸಕರು ಬೆಂಬಲ ಹಿಂಪಡೆದಿರುವ ಕಾರಣ ಸದನದಲ್ಲಿ ಸರಕಾರದ ಬಹುಮತ ಪರೀಕ್ಷೆ ನಡೆಸಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ರಾಜ್ಯಪಾಲ ಸಿ.ಎಚ್.ವಿದ್ಯಾಸಾಗರ್ ತಳ್ಳಿಹಾಕಿದ್ದು, ಬಂಡಾಯ ಶಾಸಕರು ಇನ್ನೂ ಎಐಎಡಿಂಕೆಯಲ್ಲೇ ಇರುವ ಕಾರಣ ಈ ಪ್ರಕರಣದಲ್ಲಿ ತಾನು ಮಧ್ಯಪ್ರವೇಶಿಸುವಂತಿಲ್ಲ ಎಂದಿದ್ದಾರೆ.
ಈ 19 ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಲಾಗಿಲ್ಲ ಅಥವಾ ಇತರ ಪಕ್ಷಗಳಿಗೆ ಅವರು ಸೇರ್ಪಡೆಗೊಂಡಿಲ್ಲ. ಆದ್ದರಿಂದ ಮುಖ್ಯಮಂತ್ರಿ ಪಳನಿಸ್ವಾಮಿ ಬಹುಮತ ಕಳೆದುಕೊಂಡಿದ್ದಾರೆ ಎಂದು ಪರಿಗಣಿಸಲಾಗದು ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಸಿಪಿಐ, ಸಿಪಿಐ-ಎಂ, ವಿಸಿಕೆ, ಎಂಎಂಕೆ ಪಕ್ಷಗಳ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ , ಎಐಎಡಿಂಕೆಯ 19 ಶಾಸಕರು ಉಚ್ಛಾಟಿತ ಮುಖಂಡ ಟಿಟಿವಿ ದಿನಕರನ್‌ರನ್ನು ಬೆಂಬಲಿಸಿ ಸರಕಾರಕ್ಕೆ ಬೆಂಬಲ ವಾಪಾಸು ಪಡೆದಿರುವ ಕಾರಣ ಸದನದಲ್ಲಿ ಸರಕಾರದ ಬಹುಮತ ಪರೀಕ್ಷೆ ನಡೆಸುವಂತೆ ಒತ್ತಾಯಿಸುವ ಮನವಿಯನ್ನು ಸಲ್ಲಿಸಿದರು. ಆದರೆ 19 ಶಾಸಕರು ಈಗಲೂ ಎಐಎಡಿಂಕೆ ಪಕ್ಷದಲ್ಲೇ ಇರುವ ಕಾರಣ ಈ ಬಗ್ಗೆ ತಾನು ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ. ಅಲ್ಲದೆ ಇದು ಎಐಎಡಿಎಂಕೆ ಪಕ್ಷದೊಳಗಿನ ಬಿಕ್ಕಟ್ಟು ಆಗಿರುವುದರಿಂದ ಇದರಲ್ಲಿ ತಾನು ಮಧ್ಯಪ್ರವೇಶಿಸುವಂತಿಲ್ಲ ಎಂದು ರಾಜ್ಯಪಾಲರು ಹೇಳಿರುವುದಾಗಿ ವಿಸಿಕೆ ಪಕ್ಷದ ಮುಖಂಡ ತಿರುಮಲವಲವನ್ ತಿಳಿಸಿದರು.
ಈ ಮಧ್ಯೆ, ಗುರುವಾರ ರಾಷ್ಟ್ರಪತಿಯವರನ್ನು ಭೇಟಿಯಾಗಿ ಪ್ರಕರಣದ ಕುರಿತು ವಿವರಿಸುವುದಾಗಿ ಸಿಪಿಐ ಮುಖಂಡರು ತಿಳಿಸಿದ್ದಾರೆ.







