ಪ್ರಾಣಿ ಬಲಿ ತಡೆಗೆ ಕ್ರಮ ಕೈಗೊಳ್ಳಲು ಆಗ್ರಹ
ಬೆಂಗಳೂರು, ಆ.30: ಹೈಕೋಟ್ ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಗೋಹತ್ಯೆ, ಪ್ರಾಣಿಬಲಿ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ, ಪ್ರಾಣಿಬಲಿ ಮಾಡುವುದರಿಂದ ಮತ್ತೊಬ್ಬರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಬೇರೆಯವರಿಗೆ ನೋವುಂಟು ಮಾಡಿ ಹಬ್ಬ ಆಚರಿಸುವುದು ಸರಿಯಾದ ಕ್ರಮವಲ್ಲ. ಹೀಗಾಗಿ, ಎಲ್ಲ ಧರ್ಮಗಳವರು ಪ್ರಾಣಿಬಲಿ ಮಾಡುವುದನ್ನು ನಿಷೇಧ ಮಾಡಬೇಕು ಎಂದು ಮನವಿ ಮಾಡಿದರು.
1964 ಕರ್ನಾಟಕ ಗೋ ವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣಾ ಕಾನೂನು, 1959 ರ ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಕಾನೂನು ಹಾಗೂ ಈ ಕುರಿತು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳು ನೀಡಿರುವ ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ಸರಕಾರ ಜಾರಿ ಮಾಡಬೇಕು. ಹಬ್ಬಗಳ ಸಂದರ್ಭದಲ್ಲಿ ಜಾನುವಾರು ಹತ್ಯೆ ಮಾಡುವುದನ್ನು, ಪ್ರಾಣಿಬಲಿ ನೀಡುವುದನ್ನು ಕೈಬಿಟ್ಟು ಧಾರ್ಮಿಕ ಆಚರಣೆ ನಡೆಸಬೇಕು. ಈ ಮೂಲಕ ಕೋಮು ಸೌಹಾರ್ದತೆ ಮೂಡಿಸಲು ಮುಂದಾಗಬೇಕು ಎಂದು ತಿಳಿಸಿದರು.







