ಸೆ.1 ರಿಂದ ಅಂಚೆ ಮೂಲಕ ರಾಜಕೀಯ ಶಿಕ್ಷಣ: ಡಾ.ಜೆ.ಬಿ.ರಾಜ್
ಬೆಂಗಳೂರು, ಆ.30: ರಾಷ್ಟ್ರೀಯ ರಾಜಕೀಯ ಶಿಕ್ಷಣ ಕೇಂದ್ರದ ಮೂಲಕ ರಾಜಕೀಯದಲ್ಲಿ ಆಸಕ್ತಿಯುಳ್ಳವರಿಗೆ ಸೆ.1 ರಿಂದ ಅಂಚೆ ಮೂಲಕ ರಾಜಕೀಯ ಶಿಕ್ಷಣ, ತರಬೇತಿ ನೀಡಲಾಗುತ್ತದೆ ಎಂದು ಕೇಂದ್ರದ ಅಧ್ಯಕ್ಷ ಡಾ.ಜೆ.ಬಿ.ರಾಜ್ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಲಿಚ್ಛಿಸುವವರಿಗೆ ಭಾರತೀಯ ಹಾಗೂ ಇತರೆ ರಾಷ್ಟ್ರಗಳ ಸಂವಿಧಾನ, ಇತಿಹಾಸ, ರಾಜಕೀಯ, ಪ್ರಸ್ತುತ ರಾಜಕೀಯ, ಸ್ವಾತಂತ್ರ ಸಂಗ್ರಾಮ ಹಾಗೂ ಸ್ವಾತಂತ್ರದ ನಂತರದಿಂದ ಇಲ್ಲಿಯವರೆಗೆ ರಾಜಕೀಯ ಇತಿಹಾಸ, ಸಂಸತ್ತು ಚುನಾವಣೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಶಿಕ್ಷಣ ನೀಡಲಾಗುತ್ತದೆ ಎಂದು ಹೇಳಿದರು.
ಭಾಷಣ ಕಲೆ, ಸಂವಹನ ಕಲೆ, ವ್ಯಕ್ತಿತ್ವ ವಿಕಸನ, ದೇಹ ಭಾಷೆ, ಹಾವ ಭಾವಗಳು, ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಳು, ಜನರೊಂದಿಗೆ ಬೆರೆಯುವ ವಿಧಾನ, ಚುನಾವಣೆ ಗೆಲ್ಲುವುದು, ಉತ್ತಮ ರಾಜಕಾರಣಿಯಾಗುವುದು ಹೇಗೆ ಎಂಬ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದರು.
ಸೆ.1 ರಿಂದ ಆರಂಭವಾಗಲಿರುವ ತರಬೇತಿಯ ಪಠ್ಯಪುಸ್ತಕಗಳು, ನೋಟ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಅಂಚೆ ಮೂಲಕ ಕಳಿಸಲಾಗುತ್ತದೆ. ಅಲ್ಲದೆ, ಪ್ರತಿದಿನ ಸಂಜೆ 8 ರಿಂದ 9 ರವರೆಗೆ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅನುಮಾನಗಳನ್ನು ಬಗೆಹರಿಸಲಾಗುತ್ತದೆ. ಈ ಮೂಲಕ ರಾಜಕೀಯ ಶಿಕ್ಷಣ ಪಡೆಯುವವರಿಗೆ ಉತ್ಸಾಹ ಮತ್ತು ಧೈರ್ಯ ನೀಡಲಾಗುತ್ತದೆ ಎಂದು ತಿಳಿಸಿದರು.
ರಾಜಕೀಯ ಶಿಕ್ಷಣ ತರಬೇತಿ ಪಡೆಯಲಿಚ್ಛಿಸುವ ಆಸಕ್ತರು ರಾಷ್ಟ್ರೀಯ ರಾಜಕೀಯ ಶಿಕ್ಷಣ ಕೇಂದ್ರ, 1199, ಎ ಬ್ಲಾಕ್, 2 ನೆ ಹಂತ, 6 ನೆ ಮುಖ್ಯ ರಸ್ತೆ, ಸುಬ್ರಮಣ್ಯ ನಗರ, ರಾಜಾಜಿನಗರ, ಬೆಂಗಳೂರು-560010 ಇಲ್ಲಿಗೆ ಭೇಟಿ ನೀಡಬಹುದಾಗಿದೆ. ಅಥವಾ ಹೆಚ್ಚಿನ ಮಾಹಿತಿಗಾಗಿ 90358 45566 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.







