ಸೆ.18 ರಂದು ಕನ್ನಡ ಹಬ್ಬ: ಗಣೇಶ್ ಭಟ್
ಬೆಂಗಳೂರು, ಆ.30: ಕನ್ನಡಿಗರು ಯುಕೆ ಸಂಸ್ಥೆ ವತಿಯಿಂದ ನ.18 ರಂದು ಲಂಡನ್‌ನಲ್ಲಿ ಕನ್ನಡ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಗಣೇಶ್ ಭಟ್ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಗ್ಲರ ನಾಡಿನಲ್ಲಿರುವ ಕನ್ನಡಿಗರನ್ನು ಒಟ್ಟುಗೂಡಿಸಲು ಹಾಗೂ ನಾಡು-ನುಡಿ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಂಸ್ಥೆ ನಿರಂತರವಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ಚಲನಚಿತ್ರಗಳ ಪ್ರದರ್ಶನ, ಸಮಾಜಕ್ಕಾಗಿ ದುಡಿದ ವ್ಯಕ್ತಿಗಳಿಗೆ ಸನ್ಮಾನ, ಧರ್ಮದತ್ತಿ ಸಂಸ್ಥೆಗಳಿಗೆ ಅನುದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಂಸ್ಥೆ ವತಿಯಿಂದ ಕಳೆದ 10 ವರ್ಷಗಳಿಂದ ಕನ್ನಡದ ಕುರಿತ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅದರ ಭಾಗವಾಗಿ ಪ್ರಸಕ್ತ ವರ್ಷದಲ್ಲಿ ಕನ್ನಡ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಹಿರಿತೆರೆಯ ಕಲಾವಿದ ಮಂಡ್ಯ ರಮೇಶ್, ತುಳು ನಾಡಿನ ಹಾಸ್ಯ ಕಲಾವಿದ ನವೀನ್ ಡಿ ಪಡೀಲ್, ಜಾನಪದ ಕೋಗಿಲೆ ಎಂದು ಹೆಸರು ಪಡೆದ ಗೋನಾ ಸ್ವಾಮಿ, ಖ್ಯಾತ ಹಾಸ್ಯಗಾರ ಮಹದೇವ್ ಶೆಟ್ಟಿಗೇರಿ ಹಾಗೂ ಅರಳು ಪ್ರತಿಭೆ ದಿಶಾ ರಮೇಶ್ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಂಸ್ಥೆಯ ಮಾಜಿ ಅಧ್ಯಕ್ಷ ವಿವೇಕ್‌ಹೆಗ್ಡೆ, ಸದಸ್ಯ ರವೀಂದ್ರ ಜೋಶಿ ಉಪಸ್ಥಿತರಿದ್ದರು.







