ಡಾ.ವರದಾ ಶ್ರೀನಿವಾಸ್‌ಗೆ ‘ಅರಸು ಶ್ರೀ’ ಪ್ರಶಸ್ತಿ ಪ್ರದಾನ
ಬೆಂಗಳೂರು, ಆ.30: ಅರಸು ವಿಚಾರ ವೇದಿಕೆ ವತಿಯಿಂದ ಅರಸು ತತ್ವಗಳ ಅನುಯಾಯಿ, ಸಾಹಿತಿ ಡಾ.ವರದಾ ಶ್ರೀನಿವಾಸ ಅವರಿಗೆ ‘ಅರಸು ಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಬುಧವಾರ ನಗರದ ಕಸಾಪದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೊಡ್ಡ ಬಳ್ಳಾಪುರದ ನಗರಸಭಾ ಸದಸ್ಯ ತ.ನ.ಪ್ರಭುದೇವ, ಸರ್.ಸಿ.ವಿ.ರಾಮನ್ ನಗರದ ಕಸಾಪ ಅಧ್ಯಕ್ಷ ಹೆಬ್ಬಗೋಡಿ ಗೋಪಾಲ್, ಪೊಲೀಸ್ ಅಧಿಕಾರಿ ರಾಂ.ಕೆ.ಹನುಮಂತಯ್ಯ ಸೇರಿದಂತೆ ಇನ್ನಿತರೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ಮಾತನಾಡಿದ ತ.ನ.ಪ್ರಭುದೇವ್, ದೇವರಾಜ ಅರಸು ನಡೆದು ಬಂದ ದಾರಿ ಇಂದಿನ ಪ್ರತಿಯೊಬ್ಬ ರಾಜಕಾರಣಿಗೂ ಮಾದರಿಯಾಗಬೇಕು. ಅವರ ಆಡಳಿತದ ಸಮಯದಲ್ಲಿ ದಲಿತ, ದಮನಿತ, ಶೋಷಿತರ ಧ್ವನಿಯಾಗಿ ಕೆಲಸ ಮಾಡಿದ ವ್ಯಕ್ತಿಯಾಗಿದ್ದಾರೆ. ಅರಸು ಅಂತಹ ಅತ್ಯಂತ ಶ್ರೇಷ್ಠವಾದ ಮುಖ್ಯಮಂತ್ರಿ ಮುಂದೆ ಎಂದೂ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ಕೃಷಿಕರಾದ ದೇವರಾಜ ಅರಸು ತಮ್ಮ ಅಧಿಕಾರ ಅವಧಿಯಲ್ಲಿ ಕೃಷಿಗೆ ಪೂರಕವಾದ ಯೋಜನೆ, ನೀತಿಗಳನ್ನು ಜಾರಿ ಮಾಡಿದ. ಉಳುವವನಿಗೆ ಭೂಮಿ ಎಂಬ ಭೂ ಸುಧಾರಣೆಯನ್ನು ತಂದರು. ಅರಸು ಅವರ ಅಧಿಕಾರದ ಅವಧಿಯ ಕಟ್ಟಕಡೆವರೆಗೂ ಸಮ ಸಮಾಜದ ಆಶಯದಡಿಯಲ್ಲಿ ಆಡಳಿತ ನಡೆಸಿದರು. ಎಂದೂ ಶ್ರೀಮಂತಿಕೆಯನ್ನು ಬಯಸಲಿಲ್ಲ ಎಂದು ಬಣ್ಣಿಸಿದರು.
ಪೊಲೀಸ್ ಅಧಿಕಾರಿ ಹನುಮಂತಯ್ಯ ಮಾತನಾಡಿ, ಇಂದಿನ ಸಮಾಜದಲ್ಲಿ ಎಲ್ಲವನ್ನು ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಸನ್ಮಾನ, ಪ್ರಶಸ್ತಿಗಳನ್ನೂ ಅನುಮಾನದಿಂದ ನೋಡುವಂತಾಗಿದೆ. ಹೀಗಾಗಿ, ಶ್ರೇಷ್ಠ ವ್ಯಕ್ತಿಗಳ ಹೆಸರಿನಲ್ಲಿ ನೀಡುವ ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡುವುದು ಮುಖ್ಯವಾಗುತ್ತದೆ ಎಂದರು.
ಅರಸು ಅವರು ಯಾರೂ ಮಾಡದೇ ಇದ್ದುದನ್ನು ಮಾಡಿ ತೋರಿಸಿದ ದಿಟ್ಟ ವ್ಯಕ್ತಿ ಎಂದ ಅವರು, ಒಳ್ಳೆ ಕೆಲಸ ಮಾಡುವವರ ಮೇಲೆ ಅನುಮಾನ, ಆರೋಪಗಳು ಜಾಸ್ತಿಯಿರುತ್ತವೆ. ಆದರೆ, ಅರಸು ಯಾವುದೇ ಆರೋಪಗಳಿಲ್ಲದೆ ಅಧಿಕಾರ ನಡೆಸಿದ ವ್ಯಕ್ತಿಯಾಗಿದ್ದಾರೆ. ಬಡವರು ದಲಿತರಿಗೆ ತಮ್ಮ ಭೂಮಿ ಸೇರಿದಂತೆ ಸಾರ್ವಜನಿಕ ಭೂಮಿ ಹಂಚಿಕೆ ಮಾಡಿದ ಏಕೈಕ ಮುಖ್ಯಮಂತ್ರಿ ಅರಸು ಅವರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್.ಸಿ.ವಿ.ರಾಮನ್ ನಗರದ ಕಸಾಪ ಅಧ್ಯಕ್ಷ ಹೆಬ್ಬಗೋಡಿ ಗೋಪಾಲ್, ಪ್ರಶಸ್ತಿ ಪುರಸ್ಕೃತೆ ಡಾ.ವರದಾ ಶ್ರೀನಿವಾಸ, ಟಿ.ಪಿ.ಪ್ರಸನ್ನಕುಮಾರ್, ಎಂ.ತಿಮ್ಮಯ್ಯ, ರಾ.ವಿಜಯ ಕುಮಾರ್ ಉಪಸ್ಥಿತರಿದ್ದರು.







