ಉಳ್ಳಾಲ: ಸೈಯದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಸಂಘಟನೆಗೆ ಚಾಲನೆ

ಉಳ್ಳಾಲ, ಆ. 30: ಮದ್ರಸ ಕಾರ್ಯಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮತ್ತು ಧಾರ್ಮಿಕ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಸಲುವಾಗಿ ಸೈಯದ್ ಮದನಿ ಮೊಹಲ್ಲಾ ಒಕ್ಕೂಟ ಇದರ ಅಧೀನ ಮೊಹಲ್ಲಾಗಳ ಮದ್ರಸ, ಮಸೀದಿ ಉಸ್ತಾದರುಗಳ ನೇತೃತ್ವದಲ್ಲಿ ಸೈಯದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ಸಂಘಟನೆಗೆ ಚಾಲನೆ ನೀಡಲಾಯಿತು.
ಉಳ್ಳಾಲ ಮಂಚಿಲದ ಬದ್ರ್ ಆಡಿಟೋರಿಯಂ ನಲ್ಲಿ ನಡೆದ ಸಭೆಯಲ್ಲಿ ಅಲ್ ಹಾಜ್ ಅಬೂ ಮುಖ್ತಾರ್ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ಸೈಯದ್ ಮದನಿ ಮೊಹಲ್ಲಾ ಒಕ್ಕೂಟ ಇದರ ಪ್ರಧಾನ ಕಾರ್ಯದರ್ಶಿ ಹಮೀದ್ ಮಂಚಿಲ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಪ್ರಭಾಷಣ ಮಾಡಿದ ಸೈಯದ್ ಮದನಿ ಮೊಹಲ್ಲಾ ಒಕ್ಕೂಟ ಇದರ ಅಧ್ಯಕ್ಷರಾದ ಪಿ. ಎಸ್. ಎಂ ಶಿಹಾಬುದ್ದೀನ್ ಸಖಾಫಿ ಮದ್ರಸ ಎಂಬುದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ವ್ಯವಸ್ಥೆಯಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯೆಯನ್ನು ನೀಡಲು ಪೂರಕವಾಗುವ ವಾತಾವರಣವನ್ನು ನಿರ್ಮಿಸುವುದು ಅನಿವಾರ್ಯವಾಗಿದೆ. ಪವಿತ್ರ ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆಶಯಾದರ್ಶಗಳಿಗೆ ಚ್ಯುತಿ ಬಾರದಂತೆ ಕಾಪಾಡುವ ಮತ್ತು ಮದ್ರಸ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಹೊಣೆಗಾರಿಕೆ ಮದ್ರಸ ಉಸ್ತಾದರುಗಳ ಮೇಲಿದೆ ಎಂದು ತಿಳಿಸಿದರು. ಉಳ್ಳಾಲ ನಗರ ಸಭಾ ಸದಸ್ಯರಾದ ಫಾರೂಖ್ ಹಳೆಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಹಾಫಿಝ್ ಹಸನ್ ಮುಬಾರಕ್ ಸಖಾಫಿ, ಪ್ರಧಾನ ಕಾರ್ಯದರ್ಶಿಯಾಗಿ ಅಬೂ ಶಮ್ಮಾಝ್ ಉಸ್ತಾದ್, ಕೋಶಾಧಿಕಾರಿಯಾಗಿ ಮಳಹರಿ ಉಸ್ತಾದ್, ಸಂಚಾಲಕರಾಗಿ ಯೂಸುಫ್ ಉಸ್ತಾದ್, ಉಪಾಧ್ಯಕ್ಷರಾಗಿ ಖಾಲಿದ್ ಮದನಿ, ಜಮಾಲ್ ಮುಸ್ಲಿಯಾರ್, ಜೊತೆ ಕಾರ್ಯದರ್ಶಿಯಾಗಿ ಅಬೂ ಫಝಲ್ ಸಖಾಫಿ, ಉಸ್ಮಾನ್ ಮುಸ್ಲಿಯಾರ್ ಹಾಗು ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಇದರ ಅಧೀನ ಮೊಹಲ್ಲಾಗಳ ಮುಖ್ಯೋಪಾಧ್ಯಾಯರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.
ಈ ಸಂದರ್ಭದಲ್ಲಿ ಅಳೇಕಲ ಮೊಹಲ್ಲಾ ಪ್ರಧಾನ ಕಾರ್ಯದರ್ಶಿ ಯು ಡಿ ಅಶ್ರಫ್, ಬದ್ರುದ್ದೀನ್ ಹಾಜಿ, ಮನ್ಸೂರ್ ದಾರಂದಬಾಗಿಲು ಹಾಗು ಸೈಯದ್ ಮದನಿ ಮೊಹಲ್ಲಾ ಒಕ್ಕೂಟದ ಅಧೀನ ಮೊಹಲ್ಲಾಗಳ ಸಮಿತಿ ಪದಾಧಿಕಾರಿಗಳು, ಉಸ್ತಾದರುಗಳು ಉಪಸ್ಥಿತರಿದ್ದರು.
ಅಶ್ರಫ್ ಸುಳ್ಯ ಸ್ವಾಗತಿಸಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಸೈಯದ್ ಜಲಾಲ್ ತಂಙಳ್ ಧನ್ಯವಾದಗೈದರು.







