ಕೆಪಿಸಿಸಿ ಕಾರ್ಯದರ್ಶಿ ವಿಜಯ್ ಮುಳಗುಂದ್ ನಿವಾಸದ ಮೇಲೆ ಐಟಿ ದಾಳಿ
ಬೆಂಗಳೂರು, ಆ. 30: ಕೆಪಿಸಿಸಿ ಕಾರ್ಯದರ್ಶಿ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಆಪ್ತ ವಿಜಯ್ ಮುಳಗುಂದ ಅವರ ನಿವಾಸದ ಮೇಲೆ ಆದಾಯ ತೆರಿಗೆ(ಐಟಿ) ಇಲಾಖೆ ಅಧಿಕಾರಿಗಳು ಬೆಳಗ್ಗೆ ದಾಳಿ ನಡೆಸಿ ಆಸ್ತಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ರವಿವಾರ ಇಲ್ಲಿನ ಸುಬ್ರಹ್ಮಣ್ಯನಗರದಲ್ಲಿರುವ ವಿಜಯ್ ಮುಳಗುಂದ್ ಅವರ ಮನೆ ಸೇರಿದಂತೆ ಅವರ ಒಡೆತನದ ನಾಲ್ಕೈದು ಸ್ಥಳಗಳಲ್ಲಿ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಆಸ್ತಿ, ಚಿನ್ನಾಭರಣ, ಬ್ಯಾಂಕ್ ವಹಿವಾಟು ಸೇರಿದಂತೆ ದಾಖಲೆ ಪತ್ರಗಳ ಪರಿಶೀಲನೆ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.
ಏಕಕಾಲಕ್ಕೆ ಸುಮಾರು 10 ಮಂದಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಸಂಜೆಯ ವರೆಗೂ ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ. ಆ ಬಳಿಕ ಕೆಲ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗುಜರಾತ್ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಆ ರಾಜ್ಯದ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತಂದ ಸಂದರ್ಭದಲ್ಲಿ ಅವರ ವಾಸ್ತವ್ಯದ ಉಸ್ತುವಾರಿಯನ್ನು ವಿಜಯ್ ಮುಳಗುಂದ್ ವಹಿಸಿಕೊಂಡಿದ್ದರು.
ಅಲ್ಲದೆ, ಇಂಧನ ಸಚಿವ ಶಿವಕುಮಾರ್ ಅವರ ಪರಮಾಪ್ತರೂ ಆಗಿದ್ದು, ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡಿದ್ದಾರೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವಿಜಯ್ ಮುಳಗುಂದ್ ಕಾವೇರಿ ಕೈಮಗ್ಗ ನಿಗಮ ನಿಯಮಿತದ ಅಧ್ಯಕ್ಷರಾಗಿದ್ದರು ಎಂದು ಗೊತ್ತಾಗಿದೆ.







