ಕೆರೆಗಳ ಡಿನೋಟಿಫಿಕೇಷನ್ ಪ್ರಸ್ತಾವ ಕೈ ಬಿಡಲಾಗಿದೆ: ರಾಜ್ಯಪಾಲರಿಗೆ ಸಿಎಂ ಸ್ಪಷ್ಟೀಕರಣ

ಬೆಂಗಳೂರು, ಆ.30: ನಿರ್ಜೀವ ಕೆರೆಗಳ ಡಿನೋಟಿಫಿಕೇಷನ್ ಪ್ರಸ್ತಾವವನ್ನು ರಾಜ್ಯ ಸರಕಾರವು ಕೈ ಬಿಟ್ಟಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.
ಈ ಸಂಬಂಧ ರಾಜ್ಯಪಾಲರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ, ತನ್ನ ಅಸ್ತಿತ್ವವನ್ನು ಕಳೆದುಕೊಂಡಿರುವ ಹಾಗೂ ಪುನಃ ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲದಂತಹ ಕೆರೆಗಳ ಪ್ರದೇಶವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ರಾಜ್ಯ ಸರಕಾರವು ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 68ಕ್ಕೆ ತಿದ್ದುಪಡಿ ತರಬೇಕೆಂಬ ಪ್ರಸ್ತಾವನೆಯನ್ನು ಪರಿಶೀಲನೆಗೊಳಪಡಿಸಿತ್ತು ಎಂದು ಹೇಳಿದ್ದಾರೆ.
ತಿದ್ದುಪಡಿ ಕಾಯ್ದೆಯ ಕರಡು ಪ್ರತಿಯನ್ನು ವಿವಿಧ ಇಲಾಖೆಗಳಿಗೆ ಕಳುಹಿಸಿ ಅವರ ಅಭಿಪ್ರಾಯವನ್ನು ಕೋರಲಾಗಿತ್ತು. ಇಲಾಖೆಗಳು ಕಳುಹಿಸಿಕೊಟ್ಟ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ‘ನಿರ್ಜೀವ ಕೆರೆಗಳ ಡಿನೋಟಿಫಿಕೇಷನ್’ ಪ್ರಸ್ತಾವನೆಯನ್ನು ಕೈ ಬಿಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ರಾಜ್ಯ ಸರಕಾರವು ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಕೆರೆಗಳಿಗೆ ಸಂಬಂಧಿಸಿದಂತೆ ಯಾವುದೇ ತಿದ್ದುಪಡಿಗಳನ್ನು ತರಲು ಉತ್ಸುಕವಾಗಿಲ್ಲ. ರಾಜ್ಯದ ಜನರ ಕಲ್ಯಾಣಕ್ಕಾಗಿ ಹಾಗೂ ಈಗಿರುವ ಮತ್ತು ಭವಿಷ್ಯದ ಪೀಳಿಗೆಗಾಗಿ ಕೆರೆಗಳ ಸಂರಕ್ಷಣೆಯನ್ನು ಮಾಡಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.







