ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಆರೋಪಿಗಳನ್ನು ಬಂಧಿಸಲು ಆಗ್ರಹ
ಬೆಂಗಳೂರು, ಆ.30: ವಿಚಾರವಾದಿಗಳಾದ ಎಂ.ಎಂ.ಕಲಬುರ್ಗಿ, ಪನ್ಸಾರೆ, ಧಾಬೋಲ್ಕರ್ ಅವರನ್ನು ಹತ್ಯೆಗೈದ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ ಧೋರಣೆ ತಾಳುತ್ತಿರುವ ಸರಕಾರಗಳ ನಡೆಯನ್ನು ಖಂಡಿಸಿ ಇಂದು ನಗರದಲ್ಲಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಪುರಭವನದ ಮುಂಭಾಗ ಹಮ್ಮಿಕೊಂಡಿದ್ದ ಪತ್ರಿಭಟನೆಯಲ್ಲಿ ಕರ್ನಾಟಕ ಲೇಖಕಿಯರ ಸಂಘ, ರಣಧೀರ ಪಡೆ, ಸಮುದಾಯ, ಎಸ್‌ಎಫ್‌ಐ, ಡಿವೈಎಫ್‌ಐ ಸೇರಿದಂತೆ ಇತರೆ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡು ಈ ಮೂವರು ವಿಚಾರವಂತರನ್ನು ಕೊಲೆಗೈದ ಆರೋಪಿಗಳನ್ನು ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಮಾತನಾಡಿ, ಸಾಹಿತಿ, ವಿಚಾರವಾದಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಆಗಿ ಇಂದಿಗೆ ಎರಡು ವರ್ಷ ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಈ ಪ್ರಕರಣದಲ್ಲಿ ಸಂಬಂಧ ಒತ್ತಡ ಇರುವುದರಿಂದಲ್ಲೇ ಸರಕಾರ ಮತ್ತು ಪೊಲೀಸ್ ಇಲಾಖೆಯು ತನಿಖೆ ನಡೆಸಲು ವಿಳಂಬ ಧೋಣೆ ತಾಳುತ್ತಿವೆ ಎಂದು ದೂರಿದರು.
ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ವಿಚಾರವಂತರಿಗೆ ನೆಲೆಯಿಲ್ಲದಂತಾಗಿದೆ. ಇನ್ನು ಅಭಿವ್ಯಕ್ತಿ ಸ್ವಾತಂತ್ರ, ಆಹಾರದ ಹಕ್ಕುಗಳ ಮೇಲೆ ನಿರಂತರವಾಗಿ ಹಲ್ಲೆ ದಬ್ಬಾಳಿಕೆಗಳು ನಡೆಯುತ್ತಿದ್ದರು ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ವಿಚಾರವಾದಿಗಳ ಕೊಲೆಗಳಿಗೆ ಕೊನೆ ಯಾವಾಗ ಎನ್ನುವ ಪ್ರಶ್ನೆ ಜನರಲ್ಲಿ ಕಾಡುತ್ತಿದೆ. ವಿಚಾರವಾದಿಗಳಾದ ಎಂ.ಎಂ.ಕಲಬುರ್ಗಿ, ಪನ್ಸಾರೆ, ಧಾಬೋಲ್ಕರ್ ಅವರನ್ನು ಹತ್ಯೆಗೈದ ಆರೋಪಿಗಳನ್ನು ಯಾಕೆ ಬಂಧಿಸಿಲ್ಲ ಎನ್ನುವ ಜನರ ಪ್ರಶ್ನೆಗೆ ಸರಕಾರಗಳೇ ಉತ್ತರಿಸಬೇಕು ಎಂದರು.
ಸಾಹಿತಿ ಯೋಗೇಶ್ ಮಾಸ್ಟರ್ ಮಾತನಾಡಿ, ಎಂ.ಎಂ.ಕಲಬುರ್ಗಿ ಅವರ ಮೇಲೆ ಎರಡು ಬಾರಿ ಕೊಲೆ ಯತ್ನ ನಡೆದ ಮೇಲಾದರೂ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಿದ್ದರೆ ಅವರು ಇನ್ನೂ ನಮ್ಮ ಜೊತೆ ಇರುತ್ತಿದ್ದರು. ಅವರ ಹತ್ಯೆಯ ಹಿಂದೆ ಕಾಣದ ಕೈಗಳನ್ನು ಪತ್ತೆ ಹಚ್ಚಲು ಸರಕಾರ ಹಿಂದು ಮುಂದು ನೋಡುತ್ತಿರುವುದರಲ್ಲಿ ಅನುಮಾನ ಕಾಡುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ, ಡಿವೈಎಫ್‌ಐನ ಕಾರ್ಯದರ್ಶಿ ರಾಜಶೇಖರ ಮೂರ್ತಿ ಸೇರಿದಂತೆ ಇತರರು ಇದ್ದರು.







