ಬಿಡಿಎ, ಕೆಎಸ್‌ಪಿಸಿಬಿಗೆ ಹೈಕೋರ್ಟ್ ನೋಟಿಸ್
ಎಚ್‌ಎಸ್‌ಆರ್ ಲೇಔಟ್ ಕೆರೆ ಪುನರುಜ್ಜೀವನಕ್ಕೆ ಪಿಐಎಲ್ ಸಲ್ಲಿಕೆ
ಬೆಂಗಳೂರು, ಆ.30: ಎಚ್‌ಎಸ್‌ಆರ್ ಲೇಔಟ್ ಕೆರೆ ಪುನರುಜ್ಜೀವನಗೊಳಿಸಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ವಕೀಲ ಎಂ.ಜಿ. ಶಿವಶಂಕರ ರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.
ಎಚ್‌ಎಸ್‌ಆರ್ ಲೇಔಟ್ ಒಟ್ಟು 28 ಎಕರೆ ಕೆರೆ ವಿಸ್ತೀರ್ಣ ಹೊಂದಿತ್ತು. ಆದರೆ, ಬಿಡಿಎ 2003ರಲ್ಲಿ ಈ ಕೆರೆಯ ಜಾಗವನ್ನು ಉದ್ಯಾನ ಮತ್ತು ಜಿ ಕೆಟಗರಿ ಸೈಟ್‌ಗಳಾಗಿ ಪರಿವರ್ತಿಸಿತ್ತು. ಇದು ಕಾನೂನು ಬಾಹಿರ ಎಂದು ಆರೋಪಿಸಿರುವ ಅರ್ಜಿದಾರರು, ಎಚ್‌ಎಸ್‌ಆರ್ ಲೇಔಟ್ ಕೆರೆಯನ್ನು ಮತ್ತೆ ಪುನರುಜ್ಜೀವನಗೊಳಿಸಲು ಬಿಡಿಎ ಹಾಗೂ ಕೆಎಸ್‌ಪಿಸಿಬಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಬಿಡಿಎಗೆ ನೋಟಿಸ್ ಜಾರಿ: ಜಯನಗರದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟಿದ್ದ ಸಿಎ ನಿವೇಶನವನ್ನು ಜಯನಗರ ಸಾಂಸ್ಕೃತಿಕ ಮತ್ತು ನಾಗರಿಕ ಸಂಘಕ್ಕೆ ನೀಡಿರುವ ಕ್ರಮ ಪ್ರಶ್ನಿಸಿರುವ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ಬಿಡಿಎಗೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ.
ಸಿಎ ನಿವೇಶನವು ಸಾರ್ವಜನಿಕರ ಉಪಯೋಗಕ್ಕೆ ಮೀಸಲಾಗಿರುತ್ತದೆ. ಸಮುದಾಯ ಭವನ ಅಥವಾ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳಿಗೆ ಸಿಎ ನಿವೇಶನ ಬಳಸಬಹುದು. ಆದರೆ, ಜಯನಗರ ಸಾಂಸ್ಕೃತಿಕ ಮತ್ತು ನಾಗರಿಕ ಸಂಘವು ಸಿಎ ನಿವೇಶನದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ನಡೆಸುತ್ತಿದೆ. ಇದು ಬಿಡಿಎ ನಿಯಮಗಳ ಉಲ್ಲಂಘನೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದು, ಕೂಡಲೇ ಸಂಘದಿಂದ ಸಿಎ ನಿವೇಶನ ಹಿಂಪಡೆದುಕೊಳ್ಳುವಂತೆ ಬಿಡಿಎಗೆ ನಿರ್ದೇಶಿಸಬೇಕು ಎಂದು ಕೋರಲಾಗಿದೆ.







