ರಿಯಾದ್: ಹಜ್ಜಾಜಿಗಳ ಸೇವೆಗೆ ಸಜ್ಜಾದ ಇಂಡಿಯಾ ಫ್ರೆಟರ್ನಿಟಿ ಫಾರಂ

ರಿಯಾದ್, ಆ. 30: ಕಳೆದ ಹಲವಾರು ವರ್ಷಗಳಿಂದ ಹಜ್ ಯಾತ್ರಾರ್ಥಿಗಳ ನಿರಂತರ ಸೇವೆ ಮಾಡುತ್ತಿರುವ ಇಂಡಿಯಾ ಫ್ರೆಟರ್ನಿಟಿ ಫಾರಂನ ಸ್ವಯಂ ಸೇವಕರ ತಂಡವು ಈ ಬಾರಿಯೂ ಸಹ ಸೌದಿ ಅರೇಬಿಯಾದ ವಿವಿಧ ಪ್ರದೇಶಗಳ ಸಾವಿರಾರು ಅನಿವಾಸಿ ಭಾರತೀಯ ಸ್ವಯಂ ಸೇವಕರ ತಂಡದೊಂದಿಗೆ ಸೇವೆ ಮಾಡುತ್ತಿದೆ.
ಇದರ ಭಾಗವಾಗಿ ರಿಯಾದ್ ವಿಭಾಗದಿಂದ ಕೇರಳ, ಕರ್ನಾಟಕ, ತ. ನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ. ಉ.ಪ್ರದೇಶ, ಬಿಹಾರ ಮತ್ತು ಉತ್ತರಾಖಂಡ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಅನಿವಾಸಿ ಭಾರತೀಯರ ಸ್ವಯಂ ಸೇವಕರ ತಂಡವು ಹಜ್ ಯಾತ್ರಾರ್ಥಿಗಳ ಸೇವೆಗೆ ಪವಿತ್ರ ಮಕ್ಕ ತೆರಳಲು ಸಜ್ಜಾಗಿದೆ.
ಆ. 26 ರಂದು ಬತ್ತದಲ್ಲಿರುವ ಶಿಫಾ ಅಲ್ ಜಝೀರಾ ಆಸ್ಪತ್ರೆಯ ಸಭಾಂಗಣದಲ್ಲಿ ಕ್ಯಾಪ್ಟನ್ ಜುನೇದ್ ಅನ್ಸಾರಿ ಮತ್ತು ಸಹ ಕ್ಯಾಪ್ಟನ್ ಅಲ್ತಾಫ್ ಮಂಜೇಶ್ವರ ರವರ ನೇತೃತ್ವದಲ್ಲಿ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಮಾಜಿ ಚೇಯರ್ ಮ್ಯಾನ್ ಜನಾಬ್ ಹೈದರ್ ಅಲಿ, IFFನ ಸಮಾಜ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತ ಸ್ವಯಂ ಸೇವಕರಿಗೆ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ ಇಂಡಿಯಾ ಫ್ರೆಟರ್ನಿಟಿ ಫಾರಂ ರಿಯಾದ್ ಕೇಂದ್ರ ಸಮಿತಿಯ ಅಧ್ಯಕ್ಷ ಸಲೀಮ್ ಖಾಸಿಮಿ ಮಾತನಾಡಿ, ಹಜ್ಜಾಜಿಗಳ ಸೇವೆ ಮಾಡಲು ಇಂಡಿಯಾ ಫ್ರೆಟರ್ನಿಟಿ ಫಾರಂ ರಿಯಾದ್ ಘಟಕವು ಸಕಲ ಸಿದ್ಧತೆಯೊಂದಿಗೆ ಸಿದ್ಧವಿದೆ ಮತ್ತು ಸಮಾಜ ಸೇವೆಯ ಪ್ರಾಮುಖ್ಯತೆಯನ್ನು ಸವಿವರವಾಗಿ ತಿಳಿಸಿದರು.
ವೇದಿಕೆಯಲ್ಲಿ ಇಂಡಿಯನ್ ಸೋಶಿಯಲ್ ಫಾರಂನ ಕೇಂದ್ರ ಸಮಿತಿಯ ಅಧ್ಯಕ್ಷ ಕೋಯಾ ಉಪಸ್ಥಿತರಿದ್ದರು. ಸ್ವಯಂ ಸೇವಕರಿಗೆ ಮಲಯಾಳಂ, ತಮಿಳು, ಕನ್ನಡ ಮತ್ತು ಉರ್ದು ಭಾಷೆಯಲ್ಲಿ ತರಬೇತಿ ನೀಡಲಾಯಿತು. ಕಾರ್ಯಕ್ರಮವನ್ನು ಫಹೀಮ್ ಹೈದರಾಬಾದ್ ನಿರೂಪಿಸಿದರೆ, ಇಸ್ಮಾಯಿಲ್ ಇನೋಳಿ ವಂದಿಸಿದರು.
ಈ ಸಂಧರ್ಭದಲ್ಲಿ ಇಂಡಿಯಾ ಫ್ರೆಟರ್ನಿಟಿ ಫಾರಂ ಜಿದ್ದಾ ಘಟಕವು ಹಜ್ ಯಾತ್ರಾರ್ಥಿಗಳಿಗಾಗಿ ಸಿದ್ಧಪಡಿಸಿದ ಆಂಡ್ರಾಯ್ಡ್ ಆಪ್ Hajj Navigator ನ ಸದುಪಯೋಗ ಪಡೆದುಕೊಳ್ಳಬೇಕಾಗಿ ಇಂಡಿಯಾ ಫ್ರೆಟರ್ನಿಟಿ ಫಾರಂ ಪ್ರಕಟಣೆಯಲ್ಲಿ ತಿಳಿಸಿದೆ.







