ಬೆಂಗಳೂರು, ಮಂಗಳೂರಿಗೆ ಸಮುದ್ರದಡಿಯಿಂದ ಶುದ್ಧ ಕುಡಿಯುವ ನೀರು: ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು, ಆ. 30: ಬೆಂಗಳೂರು, ಮಂಗಳೂರು ನಗರ ಸೇರಿದಂತೆ ಪ್ರಮುಖ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ರಾಜ್ಯ ಸರಕಾರ ವಿಶೇಷ ಗಮನ ನೀಡುತ್ತಿದೆ. ಈ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ಪ್ರೊ.ಸೀತಾರಾಂ ನೀಡಿರುವ ಕಾರ್ಯ ಯೋಜನಾ ವರದಿ ಕುರಿತಂತೆ ಜಲ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕರಾವಳಿ ಪ್ರದೇಶದಲ್ಲಿ ವಾರ್ಷಿಕವಾಗಿ ಸುಮಾರು 300ರಿಂದ 350 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಸಮುದ್ರದ ಒಳಗಿರುವ ಸುಮಾರು 22 ಟಿಎಂಸಿಯಷ್ಟು ನೀರನ್ನು ಬೆಂಗಳೂರು ಮತ್ತು ಮಂಗಳೂರು ನಗರಗಳಿಗೆ ಕುಡಿಯುವ ಸಲುವಾಗಿ ಸಮುದ್ರದ ಆಳದಿಂದ ಪಡೆಯುವ ಯೋಜನೆಯ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಮಂಗಳೂರಿನಲ್ಲಿ ಪ್ರೊ.ಸೀತಾರಾಂ ನೇತೃತ್ವದ ತಂಡ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಈಗಾಗಲೇ ಪ್ರಾತ್ಯಕ್ಷತೆ ನೀಡಿದ್ದು, ಇನ್ನೊಂದು ಸುತ್ತಿನ ಸಮಾಲೋಚನೆ ನಂತರ ವಿಸ್ತೃತ ಯೋಜನಾ ವರದಿಯನ್ನು ಅಂತಿಮಗೊಳಿಸಿ, ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಲಾಗುವುದು ಎಂದು ಹೇಳಿದರು.
ಸಮುದ್ರದಿಂದ 22 ಟಿಎಂಸಿಯಷ್ಟು ನೀರನ್ನು ಮೇಲೆತ್ತಿ ಕುಡಿಯುಲು ಬಳಕೆ ಮಾಡುವ ಯೋಜನೆಗೆ ಅಂದಾಜು 2,500 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈಗಾಗಲೇ ಇಂತಹ ಯೋಜನೆ ಹಾಂಕಾಂಗ್ ಸೇರಿದಂತೆ ಏಳು ದೇಶಗಳಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಬೆಂಗಳೂರು ನಗರ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಆದ್ಯತೆ ನೀಡಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವುದರಿಂದ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.
‘ಬೆಂಗಳೂರು ನಗರದಲ್ಲಿ ಪೌರ ಕಾರ್ಮಿಕರ ಸಮಸ್ಯೆಗಳ ನಿವಾರಣೆಗೆ ಪಾಲಿಕೆ ಆಯುಕ್ತರು ಸಮಾಲೋಚನೆ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ಸಮಸ್ಯೆ ಇತ್ಯರ್ಥವಾಗಲಿದೆ. ಅಲ್ಲದೆ, ಬೆಂಗಳೂರು ನಗರದಲ್ಲಿ ಮಳೆಯಿಂದ ಆಗಿರುವ ಹಾನಿಯನ್ನು ಅಂದಾಜು ಮಾಡಲಾಗುತ್ತಿದ್ದು ಎಲ್ಲೆಡೇ ಒಳಚರಂಡಿ ದುರಸ್ತಿ ಕಾರ್ಯ ಭರದಿಂದ ಸಾಗಿದೆ’.-ಕೆ.ಜೆ.ಜಾರ್ಜ್, ಬೆಂಗಳೂರು ನಗರಾಭಿವೃದ್ಧಿ ಸಚಿವ







