ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳ ಮಧ್ಯೆ ಸಮನ್ವಯತೆ ಕೊರತೆ: ಮಹೆಶ್ ಒಡೆಯರ್

ಕಡೂರು, ಆ.30: ತಾಲೂಕಿನಲ್ಲಿ ತೆಂಗು ಬೆಳೆ ಶೇ.80ರಷ್ಟು ನಷ್ಟವಾಗಿದ್ದು, ಮೇವು ವಿತರಣೆ ಸಮರ್ಪಕವಾಗಿಲ್ಲ. ಸಮಸ್ಯೆಗಳನ್ನು ಪರಿಹರಿಸುವ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳ ಮಧ್ಯೆ ಸಮನ್ವಯತೆ ಕೊರತೆಯಿದೆ. ಆದರೂ ಶಾಸಕರು ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಜಿಪಂ ಸದಸ್ಯ ಕೆ.ಆರ್.ಮಹೇಶ್‍ಒಡೆಯರ್ ಆರೋಪಿಸಿದರು.
ಅವರು ಬುಧವಾರ ಪಟ್ಟಣದ ತಮ್ಮ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಕೊರತೆಯಿಂದ ಜನಸಾಮಾನ್ಯರು ಸಮಸ್ಯೆಗಳಿಂದ ಬಳಲುತ್ತಿದ್ದರೂ ಶಾಸಕರು ಈ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ದುರ್ಧೈವ ಎಂದರು.
ಕಡೂರು ಕ್ಷೇತ್ರದಲ್ಲಿ ವಾಡಿಕೆ ಮಳೆಗಿಂತ ಶೇ. 40 ರಷ್ಟು ಮಳೆ ಕಡಿಮೆಯಾಗಿದೆ. ಶೇ. 80 ಭಾಗ ತೆಂಗು ಬೆಳೆ ನಷ್ಟವಾಗಿದೆ. 86 ಹಳ್ಳಿಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್‍ಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ. 10 ಸ್ಥಳಗಳಲ್ಲಿ ಮೇವು ಬ್ಯಾಂಕ್ ಮೂಲಕ ಮೇವನ್ನು ವಿತರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದರು.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಶಾಸಕರು ಸಮಸ್ಯೆಗಳ ನಿವಾರಣೆಯತ್ತ ಗಮನ ಹರಿಸದಿರುವುದು ಶೋಚನೀಯ. 1,080 ಕಿ.ಮೀ ಉದ್ದಗಲಕ್ಕೂ ಕಡೂರು ಕ್ಷೇತ್ರದಲ್ಲಿ ಪಾದಯಾತ್ರೆ ಮಾಡುವ ಮೂಲಕ ಶಾಸಕ ದತ್ತ ಅವರು ಜನರ ಸಮಸ್ಯೆಗಳನ್ನು ಅರಿಯಲು ಇದು ತಮಗೆ ದಾರಿ ಎಂದು ಹೇಳಿದ್ದರು. ಆದರೆ ಅವರು ಈ ಸಮಸ್ಯೆಗಳನ್ನು ಪಾದಯಾತ್ರೆ ಸಮಯದಲ್ಲಿ ನೋಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಪಾದಯಾತ್ರೆ ನಡೆಸಿದ ಶಾಸಕ ದತ್ತ ಅವರಿಗೆ ಮಾಜಿ ಪ್ರಧಾನಿ ದೇವೇಗೌಡ, ಲೋಕಾಯುಕ್ತ ಮಾಜಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಅವರುಗಳು ಉತ್ತಮ ಶಾಸಕ ಎಂದು ಸರ್ಟಿಫಿಕೇಟ್ ನೀಡಿದ್ದಾರೆ. ಕ್ಷೇತ್ರದ ಸಮಸ್ಯೆಗಳನ್ನು ಅವರು ಕಣ್ಣಾರೆ ಕಂಡಿದ್ದರೆ ಈ ಸರ್ಟಿಫಿಕೇಟ್ ನೀಡುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
‘ಬಿಜೆಪಿ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ಇತ್ತೀಚಿಗೆ ಪಟ್ಟಣಕ್ಕೆ ಆಗಮಿಸಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿರುವುದು ಅವರ ಭೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಯಾವ ಪಕ್ಷದ ಯಾವ ರಾಜಕಾರಣಿಗೂ ಇಲ್ಲ. ಇದಕ್ಕೆ ತಾವೂ ಕೂಡ ಹೊರತಲ್ಲ. ಬಿಜೆಪಿ ಪಕ್ಷವು ಆಡಳಿತದಲ್ಲಿದ್ದಾಗ ಜನರು ಆ ಆಡಳಿತವನ್ನು ನೋಡಿದ್ದಾರೆ. ಜನರೇನು ದಡ್ಡರಲ್ಲ. ಭ್ರಷ್ಟಾಚಾರ ರಾಜಕೀಯದ ಒಂದು ಭಾಗವಾಗಿರುವುದು ಇಂದಿನ ದೊಡ್ಡ ದುರಂತ’
:- ಮಹೇಶ್ ಒಡೆಯರ್, ಜಿಪಂ ಸದಸ್ಯ.







